ADVERTISEMENT

ದೇಗುಲ ಜಾಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 12:40 IST
Last Updated 19 ಜೂನ್ 2013, 12:40 IST

ಬೇಲೂರು: ಇಲ್ಲಿಗೆ ಸಮೀಪದ ಬಂಟೇನಹಳ್ಳಿಯ ಗುಂಡು ತೋಪು ಮತ್ತು ಬನ್ನಿ ಮಂಟಪದ ಬಳಿ ಚನ್ನಕೇಶವಸ್ವಾಮಿ ದೇಗುಲಕ್ಕೆ ಸೇರಿರುವ ಜಾಗವನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಕಾರ್ಯಕ್ಕೆ ಮಂಗಳವಾರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಚಾಲನೆ ನೀಡಿದರು.

ಬಂಟೇನಹಳ್ಳಿಯ ಬನ್ನಿಮಂಟಪದ ಬಳಿ ಚನ್ನಕೇಶವ ದೇವಾಲಯಕ್ಕೆ ಸರ್ವೆ ನಂ.103ರಲ್ಲಿ 1ಎಕರೆ ಜಮೀನಿದ್ದು, ಈ ಪೈಕಿ ಮಲ್ಲೇಶ ಎಂಬುವವರು ಒಂದು ಗುಂಟೆ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಈ ಕಟ್ಟಡ ತೆರವುಗೊಳಿಸಲಾಯಿತು.

ಬಳಿಕ ಇದೇ ಬಂಟೇನಹಳ್ಳಿಯಲ್ಲಿರುವ ಗುಂಡು ತೋಪಿನಲ್ಲಿ ದೇವಾಲಯಕ್ಕೆ ಸೇರಿದ 1.35 ಎಕರೆ ಜಾಗವಿದ್ದು, ಈ ಪೈಕಿ ಪೂರ್ವ ದಿಕ್ಕಿನಲ್ಲಿ ಸುಮಾರು 220*6 ಮತ್ತು ಉತ್ತರ ದಿಕ್ಕಿನಲ್ಲಿ 300*20 ಅಡಿಯಷ್ಟು ಜಾಗ ಒತ್ತುವರಿಯಾಗಿದೆ.

ರಫೀಕ್, ಇಸಾಕ್ ಸಾಹೇಬ್, ಜಾವಿದ್, ಅಕ್ರಂ ಪಾಷ, ಹಮೀದ್ ಪಾಷ, ಕಮಿಲ್ ಪಾಷ, ಸಮೀ ಉಲ್ಲಾ, ಅಬೀದ್ ಹುಸೇನ್, ಸೈಯ್ಯದ್ ರಫಿಕ್, ನವಾಬ್ ಪಾಷಾ, ಪುಟ್ಟಸ್ವಾಮಿ, ಹಮೀದ್ ಸಹೀಬ್ ಎಂಬುವವರು ಈ ಜಾಗವನ್ನು ಒತ್ತುವರಿ ಮಾಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೋಟೀಸ್ ಜಾರಿ ಮಾಡಿ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು.

ತೆರವುಗೊಳಿಸದಿದ್ದಾಗ ದೇವಾಲಯದ ಆಡಳಿತ ಮಂಡಳಿ ಮತ್ತು ಕಂದಾಯ ಅಧಿಕಾರಿಗಳು ಸರ್ವೇಯರ್‌ಗಳ ಸಹಾಯದಿಂದ ದೇವಸ್ಥಾನದ ಜಾಗವನ್ನು ಗುರುತು ಮಾಡಿದ ನಂತರ ದೇವಾಲಯದ ಜಾಗದುದ್ದಕ್ಕೂ ಗುಂಡಿ ತೋಡುವ ಕೆಲಸಕ್ಕೆ ಮುಂದಾದ ಸಂದರ್ಭದಲ್ಲಿ ಒತ್ತುವರಿದಾರರು ಈ ಕಾರ್ಯಕ್ಕೆ ಅಡ್ಡಿ ಪಡಿಸಿದರು. ಪಶ್ಚಿಮ ದಿಕ್ಕಿನಲ್ಲಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೋಡಲು ಮುಂದಾದ ಸಂದರ್ಭದಲ್ಲಿ ಪಕ್ಕದ ಜಮೀನಿನ ಮಾಲೀಕ ಸರ್ದಾರ್ ಪಾಷಾ ಇದಕ್ಕೆ ತೀವ್ರವಾಗಿ ಅಡ್ಡಿ ಪಡಿಸಿದರಲ್ಲದೆ, ತೋಡಿದ್ದ ಗುಂಡಿಯನ್ನು ಮುಚ್ಚಿಸಿದ ಘಟನೆಯೂ ನಡೆಯಿತು. ಪೂರ್ವ ದಿಕ್ಕಿನಲ್ಲಿ ಗುಂಡಿ ತೋಡುವ ಸಂದರ್ಭದಲ್ಲಿ ಜನರು ಇದಕ್ಕೆ ಅಡ್ಡಿಪಡಿಸಿದರು. ಬನ್ನಿ ಮಂಟಪದ ಬಳಿ ಕಟ್ಟಡ ಒಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹೆಚ್ಚುವರಿ ತಹಶೀಲ್ದಾರ್ ಅಣ್ಣೇಗೌಡ ಗುಂಡುತೋಪಿನ ಬಳಿ ತೆರವುಗೊಳಿಸುವ ಸಂದರ್ಭದಲ್ಲಿ ಕಚೇರಿಗೆ ಹೋಗಿ ಬರುತ್ತೇನೆಂದು ಹೇಳಿ ಅಲ್ಲಿಂದ ನಾಪತ್ತೆಯಾದವರು ಸಂಜೆಯವರೆಗೂ ಇತ್ತ ಸುಳಿಯದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.
ನಂತರ ಮಾತನಾಡಿದ ಚನ್ನಕೇಶವ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್ `ದೇಗುಲದ ಆಸ್ತಿ ಒತ್ತುವರಿಯಾಗಿದೆ.

ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ಮೂರು ವರ್ಷದ ಹಿಂದೆಯೇ ಆದೇಶಿಸಿದ್ದರು. ಇಲ್ಲಿಯವರೆಗೆ ಈ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಈಗ ಇದಕ್ಕೆ ಚಾಲನೆ ನೀಡಲಾಗಿದೆ. ತೆರವು ಕಾರ್ಯಾಚರಣೆ ಬುಧವಾರವೂ ಮುಂದುವರಿಯಲಿದೆ' ಎಂದು ಪತ್ರಕರ್ತರಿಗೆ ತಿಳಿಸಿದರು.

`ಕಳೆದ 25ವರ್ಷಗಳಿಂದ ನಾವು ಈ ಸ್ಥಳದಲ್ಲಿ ವಾಸವಾಗಿದ್ದೇವೆ. ಈ ಹಿಂದೆ ಶಾಸಕ ವೈ.ಎನ್. ರುದ್ರೇಶ್‌ಗೌಡರು ತಾವು ವಾಸವಿದ್ದ ಮನೆಗಳ ಮುಂಭಾಗಕ್ಕೆ 4 ಅಡಿ ಬಿಟ್ಟು ಗುಂಡಿ ತೋಡಿಸಿದ್ದರು. ಅದರಂತೆ ನಾವು ಮನೆಕಟ್ಟಿಕೊಂಡಿದ್ದೇವೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ಕಟ್ಟಡ ಒಡೆಯುವುದು ಸರಿಯಲ್ಲ' ಎಂದು ಇಲ್ಲಿನ ನಿವಾಸಿಗಳು ಹೇಳಿದರು.

ಬನ್ನಿ ಮಂಟಪದ ಬಳಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದ ಮನೆ ಮಾಲೀಕ ಮಲ್ಲೇಶ್ ಮಾತನಾಡಿ `ದೇವಾಲಯದ ಆಡಳತ ಮಂಡಳಿ ತೆರವುಗೊಳಿಸುವ ವಿಚಾರದಲ್ಲಿ ತಾರತಮ್ಯ ಎಸಗುತ್ತಿದೆ. ಏಕಾಏಕೀ ತಮ್ಮ ಮನೆಯ ಕಟ್ಟಡವನ್ನು ಒಡೆದು ಹಾಕಿದ ಅಧಿಕಾರಿಗಳು ಇನ್ನಿತರ ಜಾಗಗಳಲ್ಲಿ ಒತ್ತುವರಿಯಾಗಿರುವುದನ್ನು ಹಾಗೆಯೇ ಬಿಟ್ಟಿದ್ದಾರೆ' ಎಂದು ಆರೋಪಿಸಿದರು.

ತೆರವು ಕಾರ್ಯಾಚರಣೆ ವೇಳೆ ಉಪ ಸಮಿತಿ ಅಧ್ಯಕ್ಷ ಎನ್.ಆರ್.ಸಂತೋಷ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಕೆ.ಶ್ರೀಹರಿ, ಬಿ.ಆರ್.ವೆಂಕಟೇಗೌಡ, ಬಿ.ಪಿ.ಶೈಲೇಶ್(ಶ್ರೀನಿವಾಸ್) ಪಿಎಸ್‌ಐ ಅಶ್ವಿನ್‌ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಮಣ ಗುರುಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.