ADVERTISEMENT

ನದಿಗೆ ಹಾರಿ ಅಣ್ಣ, ತಂಗಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:40 IST
Last Updated 8 ಏಪ್ರಿಲ್ 2013, 4:40 IST

ಶ್ರೀರಂಗಪಟ್ಟಣ: ಕೌಟುಂಬಿಕ ಕಲಹದಿಂದ ಬೇಸತ್ತು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ ಮೂವರ ಪೈಕಿ ಅಣ್ಣ, ತಂಗಿ ಮೃತಪಟ್ಟು ತಾಯಿ ಬದುಕುಳಿದ ಘಟನೆ ಇಲ್ಲಿಗೆ ಸಮೀಪದ ಪಶ್ಚಿಮ ವಾಹಿನಿ ಬಳಿ ಶನಿವಾರ ಸಂಜೆ ನಡೆದಿದ್ದು, ಪ್ರಕರಣ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಪಾಂಡವಪುರ ತಾಲ್ಲೂಕು ವಡ್ಡರಹಳ್ಳಿ ಗ್ರಾಮದ ಲೇ.ನಿಂಗೇಗೌಡ ಅವರ ಮಗ ಸುರೇಶ್ (30) ಹಾಗೂ ಆತನ ಸಹೋದರಿ ಭಾಗ್ಯ (25) ಮೃತಪಟ್ಟವರು. ನಿಂಗೇಗೌಡ ಅವರ ಪತ್ನಿ ಗೌರಮ್ಮ ಬದುಕುಳಿದಿದ್ದಾರೆ. ಸುರೇಶ್ ಮತ್ತು ಭಾಗ್ಯ ಅವರ ಶವಗಳನ್ನು ಭಾನುವಾರ ನದಿಯಿಂದ ಮೇಲೆತ್ತಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೌರಮ್ಮ ಅವರಿಗೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಭಾಗ್ಯ ತನ್ನ ಪತಿ ಮಧು ಅವರ ಜತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ತನ್ನ ತಾಯಿ ಮತ್ತು ಮಾನಸಿಕ ಅಸ್ವಸ್ಥ ಸಹೋದರನನ್ನು ಜತೆಯಲ್ಲಿ ಇರಿಸಿಕೊಂಡಿದ್ದರು. ಮದ್ಯ ವ್ಯಸನಿಯಾದ ಮಧು ಪತ್ನಿ ಭಾಗ್ಯ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಗೌರಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಿರುಕುಳ ತಾಳಲಾರದೆ ಶನಿವಾರ ರೈಲಿನಲ್ಲಿ ಇಲ್ಲಿಗೆ ಬಂದ ಮೂವರೂ ನದಿಗೆ ಹಾರಿದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

58 ಅಪರಾಧ ಪ್ರಕರಣ ದಾಖಲು
ಮಂಡ್ಯ: ಕಳ್ಳತನ, ರಸ್ತೆ ಅಪಘಾತ, ಕಳವು ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಒಟ್ಟು 58 ಅಪರಾಧ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ದಾಖಲಿಸಿ ಕೊಂಡಿದೆ. 2 ಕಳ್ಳತನ, 2 ರಸ್ತೆ ಅಪಘಾತ, 3 ಕಳವು, 1 ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಹಾಗೂ ಇತರೆ 50 ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.