ADVERTISEMENT

ನನಸಾಗದ ಕಿರು ಸೇತುವೆ ಮರು ನಿರ್ಮಾಣ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 8:45 IST
Last Updated 7 ಸೆಪ್ಟೆಂಬರ್ 2011, 8:45 IST

ಕೊಣನೂರು: ಹೆಗ್ಗಡಿಹಳ್ಳಿ ಮತ್ತು ಮುದಗನೂರು ಗ್ರಾಮದ ನಡುವೆ ಎರಡು ದಶಕ ಹಿಂದೆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದ ಹಳ್ಳದ ಕಿರು ಸೇತುವೆ ಮರು ನಿರ್ಮಾಣದ ಕನಸು ನನಸಾಗದೇ ಮರೀಚಿಕೆಯಾಗಿಯೇ ಉಳಿದಿದೆ.

ಇದರಿಂದಾಗಿ ಎರಡು ಗ್ರಾಮಗಳ ನಡುವೆ ಹಿಂದೆ ಇದ್ದ ಸಂಪರ್ಕ ಈಗ ಇಲ್ಲವಾಗಿದೆ. ಒಂದೊಮ್ಮೆ ಜನರು ಹಳ್ಳದ ಮಾರ್ಗವಾಗಿ ಸಂಚರಿಸಲು ಹೊರಟರೆ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ನುಡಿಯುತ್ತಾರೆ.

ಮಲ್ಲಿಪಟ್ಟಣ ಹೋಬಳಿಯ ಹೆಗ್ಗಡಿಹಳ್ಳಿ ಮತ್ತು ಮುದಗನೂರು ಅವಳಿ ಗ್ರಾಮಗಳಿದ್ದಂತೆ. ಆದರೆ ಈ ಗ್ರಾಮಗಳ ನಡುವೆ ಸಂಪರ್ಕ ರಸ್ತೆಯೇ ಇಲ್ಲ. ಸುಮಾರು 20 ವರ್ಷಗಳ ಹಿಂದೆ ಪ್ರವಾಹ ಬಂದು ಈ ಗ್ರಾಮಗಳ ನಡುವೆ ಇದ್ದ ಚಲುವನಗದ್ದೆಹಳ್ಳದ ಸಮೀಪ ಕಲ್ಲಿನಿಂದ ಕಟ್ಟಿದ್ದ ಪುರಾತನ ಕಾಲದ ಸೇತುವೆ ಕೊಚ್ಚಿ ಹೋಗಿದೆ. ಆಗಿನಿಂದ ಇಂದಿನವರೆಗೆ ಈ ಸೇತುವೆ ದುರಸ್ತಿ ಮಾಡುವ ಗೋಜಿಗೆ ಜಿಲ್ಲಾ ಪಂಚಾ ಯಿತಿ ಯಾಗಲಿ ಇಲ್ಲವೇ ಲೋಕೋಪ ಯೋಗಿ ಇಲಾಖೆಯಾಗಲಿ ತಲೆಕೆಡಿಸಿ ಕೊಂಡಿಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಈ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ.

ಬೇಸಿಗೆ ಕಾಲದಲ್ಲಿ ಮಾತ್ರ ಒಂದು ಊರಿನಿಂದ ಗ್ರಾಮಸ್ಥರು ನೇರವಾಗಿ ಸಂಚರಿಸಬಹುದು. ಮಳೆಗಾಲ ಬಂತೆಂದರೆ 10 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಕಿರಿದಾದ ಸೇತುವೆ ನಿರ್ಮಿಸಿ ರಸ್ತೆ ಸಂಪರ್ಕ ಕಲ್ಪಿಸಿದರೆ ಎರಡು ಗ್ರಾಮಗಳಿಗಿರುವ ಅಂತರ ಕೇವಲ 2 ಕಿ.ಮೀ. ಮಾತ್ರ. ಮುದಗನೂರು ಗ್ರಾಮಸ್ಥರಲ್ಲದೇ ಜೋಗಿ ಹೊಸಹಳ್ಳಿ, ಬೈಚನಹಳ್ಳಿ ಕಾವಲು, ಅಂಬಿಗೌಡನಹಳ್ಳಿ, ಅಲ್ಲಾಪಟ್ಟಣ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ, ಹಾಲಿನ ಡೈರಿಗೆ ಹೆಗ್ಗಡಿಹಳ್ಳಿಗೆ ಬರಬೇಕಾಗಿದೆ. ಆದರೆ ಸಂಪರ್ಕ ರಸ್ತೆ ಇಲ್ಲದೇ ಸುತ್ತಿ ಬಳಸಿ ಹೆಗ್ಗಡಿಹಳ್ಳಿಗೆ ಬಂದು ಹೋಗುತ್ತಾರೆ.

ಈ ಹಳ್ಳದ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಕಾಲುದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳೂ ಓಡಾ ಡದಷ್ಟು ಮಟ್ಟಿಗೆ ಕೆಸರು ಗದ್ದೆಯಾಗಿದೆ. ಈ ಕಚ್ಚಾ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವರಾರರು ಸ್ವಲ್ಪ ಎಚ್ಚರ ತಪ್ಪಿದರೆ ಕೆರೆ ಇಲ್ಲವೇ ಹಳ್ಳದ ಗದ್ದೆಗೆ ಉರುಳಿ ಅಪಾಯ ತಂದುಕೊಳ್ಳ ಬೇಕಾಗುತ್ತದೆ. ಕಾಲಿಟ್ಟರೆ ಜಾರಿ ಬೀಳುವ ಪ್ರಪಾತದ ಹಳ್ಳ ದಾಟಲು ಅಸಾಧ್ಯವಾಗಿದೆ.

ಮುದಗನೂರು- ಹೆಗ್ಗಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿದರೆ ಸಾವಿರಾರು ನಾಗರಿಕರಿಗೆ, ಹಳ್ಳದಿಂದ ಆಚೆ ಇರುವ ರೈತಾಪಿ ವರ್ಗದ ಜನರ ಓಡಾಟಕ್ಕೆ ಬಹಳ ಅನುಕೂಲ ವಾಗಲಿದೆ. ಹಾಗಾಗಿ ಕ್ಷೇತ್ರದ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.