ADVERTISEMENT

ನಷ್ಟ ಭರಿಸಲು ಮುಂದಾದ ಫಾರ್ಮಾ ಕಂಪೆನಿ

ಕೆ.ಎಸ್.ಸುನಿಲ್
Published 1 ಜುಲೈ 2017, 8:54 IST
Last Updated 1 ಜುಲೈ 2017, 8:54 IST
ನಷ್ಟ ಭರಿಸಲು ಮುಂದಾದ ಫಾರ್ಮಾ ಕಂಪೆನಿ
ನಷ್ಟ ಭರಿಸಲು ಮುಂದಾದ ಫಾರ್ಮಾ ಕಂಪೆನಿ   

ಹಾಸನ: ಜಿಎಸ್‌ಟಿ ಜಾರಿ ನಂತರ ಸಗಟು ಔಷಧ ವ್ಯಾಪಾರಿಗಳಿಗೆ ನಷ್ಟ ಉಂಟಾದರೆ ಶೇ 5.5 ರಷ್ಟು ನಷ್ಟ ಭರಿಸಲು ಫಾರ್ಮಾ ಕಂಪೆನಿಗಳು  ಮುಂದೆ ಬಂದಿವೆ.
ನಷ್ಟ ಭರಿಸಲು ಶೇ 25ರಷ್ಟು ಕಂಪೆನಿಗಳು ಮುಂದೆ ಬಂದಿರುವುದ ರಿಂದ ವರ್ತಕರು ಕೊಂಚ ನಿರಾಳರಾಗಿ ದ್ದಾರೆ. ಶೇ 75ರಷ್ಟು ಕಂಪೆನಿಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅದೇ ರೀತಿ ಚಿಲ್ಲರೆ ಔಷಧ ವ್ಯಾಪಾರಿ ಗಳಿಗೆ ಆಗುವ ನಷ್ಟವನ್ನು ಭರಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ, ಸಿಟಿ ಡ್ರಗ್ಸ್‌ ಹೌಸ್‌ ಮಾಲೀಕ  ರಾಮಚಂದ್ರ, ‘ಈಗಾಗಲೇ ವರ್ತಕರು ಶೇ 50ರಷ್ಟು  ಔಷಧಗಳನ್ನು ವಾಪಸ್‌ ಕಳುಹಿಸಿದ್ದಾರೆ. ಬೆಂಗಳೂರಿನಿಂದಲೂ ಔಷಧಗಳನ್ನು ಕಳುಹಿಸುತ್ತಿಲ್ಲ. ದೊಡ್ಡ  ಫಾರ್ಮಾ ಕಂಪೆನಿಗಳು ಮಾತ್ರ ನಷ್ಟ ಭರಿಸಲು ಮುಂದೆ ಬಂದಿವೆ. ಚಿಲ್ಲರೆ ಔಷಧ ವ್ಯಾಪಾರಿಗಳ ನಷ್ಟವನ್ನು ಭರಿಸಿದರೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪಾವತಿಸುತ್ತಿರುವ ವರ್ತಕರು ಶನಿವಾರ (ಜುಲೈ 1) ರಿಂದ ಜಿಎಸ್‌ಟಿ ವ್ಯವಸ್ಥೆಯಲ್ಲಿ ವಹಿವಾಟು ನಡೆಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಶೇ 80 ರಷ್ಟು ಮಂದಿ ಜಿಎಸ್‌ಟಿ ಜಾಲಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಹೊಸ ವ್ಯವಸ್ಥೆ ಬರುವವರೆಗೂ ಕೆಲ ವರ್ತಕರು ವಹಿವಾಟು ಕಡಿಮೆ ಮಾಡಿಕೊಂಡಿದ್ದಾರೆ ಹಾಗೂ ಹಳೆ ಮಾಲನ್ನು ಮಾರಾಟ ಮಾಡುವ ತವಕದಲ್ಲಿದ್ದಾರೆ. ಮತ್ತೆ ಕೆಲವರು ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದೆನಾಗೊತ್ತೋ ನೋಡೋಣ ಅಂದುಕೊಂಡು ಸುಮ್ಮನಿದ್ದಾರೆ.

ADVERTISEMENT

ಮದ್ಯ ಮಾರಾಟಗಾರರಿಗೆ ತೊಂದರೆ ಇಲ್ಲ: ‘ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಟ್ಟಿದ್ದರೂ ಉತ್ಪಾದನಾ ವೆಚ್ಚಗಳು ಹೆಚ್ಚಾಗಲಿದೆ. ಆ ಹೊರೆ ಮದ್ಯ ತಯಾರಿಕಾ ಕಂಪೆನಿಗಳ ಮೇಲೆ ಬೀಳುತ್ತದೆ. ಕಂಪೆನಿಗಳು ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಮದ್ಯ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಇಲ್ಲ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್‌.

ಗಾಯದ ಮೇಲೆ ಬರೆ ಎಳೆದಂತೆ: ತೆಂಗು, ಆಲೂಗೆಡ್ಡೆ, ಕಾಫಿ, ಮೆಣಸು, ತರಕಾರಿ ಜಿಲ್ಲೆಯ ಪ್ರಮುಖ ಬೆಳೆಗಳು. ಈ ಬೆಳೆಗಳು ಹೊಸ ತೆರಿಗೆ ವ್ಯವಸ್ಥೆಯ ಶೂನ್ಯ ಬಡ್ಡಿದರ ವ್ಯಾಪ್ತಿಯಲ್ಲಿ ಬರುತ್ತವೆ. ರೈತರ ಬೆಳೆಗಳು ಮೌಲ್ಯವರ್ಧಿತ ಉತ್ಪನ್ನದ ರೂಪ ಪಡೆದರೆ ಮಾತ್ರ ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುತ್ತವೆ.

‘ಬೆಂಗಳೂರು ಗ್ರಾಮಾಂತರ ಬಿಟ್ಟರೆ ಅತಿ ಹೆಚ್ಚು ತರಕಾರಿ ಬೆಳೆಯುವುದು ಹಾಸನ ಜಿಲ್ಲೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಆದರೆ  ಖರೀದಿ ಮಾಡುವ ವಸ್ತುವಿಗೆ ಅವರು ತೆರಿಗೆ ಪಾವತಿಸಬೇಕು. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ಹೇಳಿದರು.

‘ಶುಭ ಕಾರ್ಯಗಳಿಗೆ ಚಿನ್ನ ಅನಿವಾರ್ಯವಾಗಿದೆ. ಆಭರಣಗಳಿಗೆ ಶೇ 1 ವ್ಯಾಟ್‌ ಮತ್ತು ಶೇ 1 ಎಕ್ಸೈಜ್‌ ತೆರಿಗೆ ಇತ್ತು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಶೇ 1 ರಷ್ಟು ಮಾತ್ರ ಹೆಚ್ಚಾಗುತ್ತಿದೆ. ಒಟ್ಟಾರೆ ಶೇ  3 ರಷ್ಟು ತೆರಿಗೆ ವಿಧಿಸಿದ್ದಾರೆ. ಇದರಿಂದ ವ್ಯಾಪಾರಕ್ಕೆ ಹೊಡೆತ ಬೀಳಲಿದೆ. ಕ್ರಮೇಣ ಚೇತರಿಕೆ ಕಾಣಬಹುದು’  ಎನ್ನುತ್ತಾರೆ ಭೀಮ ಜ್ಯುವೆಲ್ಲರ್ಸ್‌ನ ಪರಮೇಶ್‌.

ಒಳ್ಳೆಯ ದಿನಗಳು ಬರಲಿವೆ
‘ಹೊಸ ತೆರಿಗೆ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ಗರಿಷ್ಠ ಬೆಲೆ ನೋಟು ರದ್ದುಗೊಳಿಸಿದಾಗಲೂ ಕೆಲ ಸಮಸ್ಯೆ ಎದುರಿಸಬೇಕಾಯಿತು. ಅದೇ ರೀತಿ ಇಲ್ಲೂ ತಾಂತ್ರಿಕ ತೊಂದರೆ ಸಹಜ. ಕೆಲ ಪದಾರ್ಥಗಳ ಬೆಲೆ ಹೆಚ್ಚಾದರೆ, ಮತ್ತೆ ಕೆಲ ವಸ್ತುಗಳ ಬೆಲೆ ಕಡಿಮೆ ಆಗಲಿದೆ.

ಮುಂದುವರೆದ ರಾಷ್ಟ್ರಗಳಲ್ಲಿ ಜೆಎಸ್‌ಟಿ ಜಾರಿಯಲ್ಲಿದೆ. ನಮ್ಮಲ್ಲೂ  ಜಾರಿಯಾದರೆ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದೆ. ತೆರಿಗೆ ವ್ಯಾಪ್ತಿಯಲ್ಲಿ ಇರದವರು ಹಂತ ಹಂತವಾಗಿ ಸೇರ್ಪಡೆಯಾಗಲಿದ್ದಾರೆ’  ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಎಚ್‌.ಟಿ.ಚಂದ್ರಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.