ADVERTISEMENT

ನಾಡ ಹೆಂಚಿನ ಮನೆಗಳ ಸೊಬಗು

ಮಾಡಾಳು ಶಿವಲಿಂಗಪ್ಪ
Published 25 ಡಿಸೆಂಬರ್ 2017, 8:49 IST
Last Updated 25 ಡಿಸೆಂಬರ್ 2017, 8:49 IST

ಅರಸೀಕೆರೆ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಈಗಲೂ ನಾಡ ಹೆಂಚಿನ ಹಳೆಯ ಮನೆಗಳು ಜನರ ಗಮನ ಸೆಳೆಯುತ್ತಿವೆ. 60ರ ದಶಕದ ಮೊದಲಿನ ಬಹುತೇಕ ಹಳೆ ಮನೆಗಳು ಕೈ ಹೆಂಚಿನ ಮನೆಗಳೇ ಆಗಿವೆ.

ಗೋಡೆಗಳಿಗೆ ಕಳಿತ ಸಿದ್ದೆಮಣ್ಣನ್ನು ಚಾವಣಿಗೆ ಗುಡ್ಡದ ಲಾಲೆ ಹುಲ್ಲನ್ನು ಬಳಸಿ ಕಟ್ಟಿದ ಅವು ಸರಳ ಹಾಗೂ ಹೆಚ್ಚು ಖರ್ಚಿಲ್ಲದ ಮನೆಗಳಾಗಿವೆ. ಆಗಿನ ಮೇಲ್‌ಸ್ತರದ ಮನೆಗಳೆಂದರೆ ನಾಡ ಹೆಂಚಿನ ಮನೆಗಳು. ನಂತರದ ದಿನಗಳಲ್ಲಿ ಅಸ್ಬೆಸ್ಟಸ್ ಶೀಟಿನ ಮನೆಗಳೂ ಸ್ಥಳಾಂತರಿಸಿದವು. ಈಗ ಸಿಮೆಂಟ್ ಕಾಂಕ್ರೀಟ್ ಮನೆಗಳದ್ದೇ ದರ್ಬಾರು.

ಪ್ರಸ್ತುತ ಕುಂಬಾರನ ಕೈ ಹೆಂಚಿನ ಮನೆಗಳಿಗೆ ಜಾಗ ಇಲ್ಲದಿದ್ದರೂ ಕೆಲ ಹಳ್ಳಿಗಳಲ್ಲಿ ಕಾಣ ಸಿಗುತ್ತವೆ. ಕೆಲವು ಕುಟುಂಬಗಳು ನಿರ್ವಹಿಸಿಕೊಂಡು ಬಂದಿರುವ ಮಣ್ಣಿನ ಗೋಡೆಯ ಹೆಂಚಿನ ಮನೆಗಳು ಪಿತ್ರಾರ್ಜಿತ ಆಸ್ತಿಯಾಗಿ ಈಗಲೂ ಉಳಿದುಕೊಂಡು ಬಂದಿವೆ.

ADVERTISEMENT

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಇಂತಹ ಕಪ್ಪು ಬಣ್ಣದ ಹೊಗೆ ಹಿಡಿದ ಹೆಂಚಿನ ಚಾವಣಿಯ ಮನೆಗಳು ಈಗಲೂ ಕಂಡು ಬರುತ್ತಿವೆ. ಗೋಡೆಗಳ ಮೇಲೆ ಹರಡಿರುವ ತೊಲೆಗಳ ಮೇಲೆ ಇಳಿಜಾರು ಚಾವಣಿಗೆ ಪೂರಕವಾಗುವಂತೆ ವಿವಿಧ ಎತ್ತರದ ಗುಜ್ಜುಗಳನ್ನು ಜೋಡಿಸಿ ಅವುಗಳ ಮೇಲೆ ತೆಂಗಿನ ಹಾಗೂ ಈಚಲು ಮರದ ತೀರುಗಳನ್ನು ಅಳವಡಿಸಲಾಗಿದೆ.

ಸಾರ್ವೇ ಹುರಿಗಳಿಂದ ಬಿಗಿದಿರುವ ಚಿಟ್ಟು ಬಿದಿರುಗಳ ಮೇಲೆ ನಾಡ ಹೆಂಚುಗಳು ಹೊದಿಸಲ್ಪಟ್ಟಿವೆ. ಸಿಲಿಂಡರಿನಾಕಾರದ ಉದ್ದ ಸೀಳಿಕೆಯ ಮಣ್ಣಿನ ಸುಟ್ಟ ಅರ್ಧ ಹೆಂಚುಗಳೇ ನಾಡ ಹೆಂಚುಗಳು. ಮೇಲ್ಮುಖವಾಗಿರುವಂತೆ ಜೋಡಿಸಿದ ಕಪ್ಪು ಹೆಂಚುಗಳು ಒಂದು ಸಾಲಿನ ಉದ್ದಕ್ಕೂ ಅವುಗಳ ಒಂದು ಅಂಚಿಗೆ ಹೊಂದಿಕೊಂಡಂತೆ ಬೋರಲಾಗಿ ಉಬ್ಬು ಮೇಲ್ಮುಖವಾಗಿರುವಂತೆ ಇನ್ನೊಂದು ಸಾಲಿನ ಹೆಂಚುಗಳು ಜೋಡಿಸಲಾಗಿರುತ್ತವೆ. ನಡುವಿನ ಒಳಾಯದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿರುವುದು ಪೂರ್ವಜರ ಕೈ ಕಸುಬಿನ ನೈಪುಣ್ಯತೆಯನ್ನು ತೋರಿಸುತ್ತದೆ.

‘ಬೇಸಿಗೆಯಲ್ಲಿ ತಣ್ಣನೆಯ ಅನುಭವ ನೀಡುವುದು ಇದರ ವೈಶಿಷ್ಟ್ಯ. ಬಾಗಿಲ ಮೇಲಿನ ತೊಲೆಯ (ತೆರವು) ಮೂಲಕ ಗಾಳಿ, ಬೆಳಕು ಸರಾಗವಾಗಿ ಹರಿದು ಬರುವಂತೆ ನಿರ್ಮಿಸಲಾಗಿದೆ. ಚಾವಣಿಯ ತೀರು, ತೊಲೆ, ರೀಪರ್‌ಗಳಿಗೆ ಗೆದ್ದಲು ಹತ್ತದಂತೆ ಕ್ರಮ ವಹಿಸಲಾಗಿದೆ. ತೊಲೆಗಳ ನಡುವೆ ತೆರೆದು ಕೊಂಡಿರುವ ಸಂದುಗಳ ಮೂಲಕವೂ ಗಾಳಿ ಸಮೃದ್ಧವಾಗಿ ಬೀಸುವುದರಿಂದ ಒಟ್ಟಾರೆ ಮನೆಯ ವಾತಾವರಣ ಯಾವಾಗಲು ತಂಪಾಗಿರುತ್ತದೆ' ಎಂದು ಮನೆಯಲ್ಲಿ ವಾಸಿಸುತ್ತಿರುವ ವೃದ್ಧ ಮಾಡಾಳಿನ ಚನ್ನಬಸಪ್ಪ ಅಭಿಪ್ರಾಯಪಡುತ್ತಾರೆ.

‘ಆಧುನಿಕವಾಗಿ ನವೀಕರಿಸಿದ್ದರೂ ಕೈ ನಾಡ ಹೆಂಚಿನ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ. ಚಳಿಗಾಲದಲ್ಲಿಯೂ ಅಷ್ಟು ಚಳಿಯಾಗುವುದಿಲ್ಲ. ಅಟ್ಟ ಇದ್ದರೆ ಹೊಗೆಯ ಮಸಿ ಕಿಟ್ಟ ಕಟ್ಟುವುದು ಸಾಮಾನ್ಯ. ಎರಡು ಮೂರು ವರ್ಷಗಳಿಗೊಮ್ಮೆ ಹೆಂಚು ಇಳಿಸಿ ಮತ್ತೆ ಮರು ಜೋಡಿಸಿದರೆ ತೊಂದರೆ ಆಗುವುದಿಲ್ಲ’ ಎನ್ನುತ್ತಾರೆ ರೈತ
ರುದ್ರಪ್ಪ ಡಿ.ಎಂ.ಕುರ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.