ADVERTISEMENT

ನಾಮಫಲಕಕ್ಕೆ ದುಪ್ಪಟ್ಟು ಬೆಲೆ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 9:15 IST
Last Updated 27 ಫೆಬ್ರುವರಿ 2011, 9:15 IST

ಸಕಲೇಶಪುರ: ತಾಲ್ಲೂಕಿನ 26 ಗ್ರಾ.ಪಂ.ಗಳಿಗೆ ಎಂಜಿಎನ್‌ಆರ್‌ಜಿಎಸ್ ಕಾಮಗಾರಿಗೆ ಹಾಕಲು ಸರಬರಾಜು ಮಾಡಲಾಗಿರುವ ನಾಮಫಲಕಗಳಿಗೆ ನೈಜ ಬೆಲೆಗಿಂತ 3 ಪಟ್ಟು ಹೆಚ್ಚು ಬಿಲ್ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ  ಜಿ.ಪಂ. ಸಿಈಓ ಅಂಜನ್‌ಕುಮಾರ್ ತನಿಖೆಗೆ ಆದೇಶ ನೀಡಿದ್ದಾರೆ.

‘ಪ್ರಜಾವಾಣಿ’ ಜತೆ  ಮಾತನಾಡಿದ ಅವರು, ಹೊನ್ನಾವರ ದಿಂದ ನಾಮಫಲಕಗಳನ್ನು ಎಲ್ಲಾ ಗ್ರಾ.ಪಂ.ಗಳಿಗೆ ಒಟ್ಟಿಗೆ ತರಿಸಿರುವುದು ಹೇಗೆ, ನಾಮಫಲಕಗಳಿಗೆ 1050 ರೂಪಾಯಿ ಹಣ ನೀಡಿರುವ ಬಗ್ಗೆ ಬಂದಿರುವ ಆರೋಪದ ವಿಚಾರಣೆ ನಡೆಸುವಂತೆ ಜಿ.ಪಂ. ಉಪ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದೇ ಒಂದು ರೂಪಾಯಿ ದುರುಪಯೋಗ ಆದರೂ ಕ್ಷಮಿಸಲಾಗುವುದಿಲ್ಲ ಎಂದರು.

ಜಿ.ಪಂ. ಉಪಕಾರ್ಯದರ್ಶಿ ಹೇಳಿದ್ದು: ಉದ್ಯೋಗ ಖಾತ್ರಿ ಕಾಮ ಗಾರಿಗಳಿಗೆ ಹಾಕುವ ನಾಮಫಲಕ ಗಳಿಗೆ ಹೆಚ್ಚಿನ ಹಣ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗೆ ವರದಿ ನೀಡುವಂತೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗೆ ನೋಟೀಸ್ ನೀಡಲಾಗಿದೆ. ಸದರಿ ಯೋಜನೆಯಲ್ಲಿ ಹಣ ದುರುಪ ಯೋಗ ಆರೋಪದ ಮೇಲೆ ಅರಕಲಗೂಡಿನಲ್ಲಿ ಅಧಿಕಾರಿ ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಲಕ್ಷ್ಮಿನರಸಯ್ಯ ಹೇಳಿದರು.

ಕಾರ್ಯದರ್ಶಿ ಹಾಗೂ ಪಿಡಿಓ ಗಳಿಗೆ ನೋಟಿಸ್: ನಾಮಫಲಕಗಳನ್ನು ಯಾವ ಗುತ್ತಿಗೆದಾರರಿಂದ ಖರೀದಿ ಮಾಡಲಾಗಿದೆ? ನಾಮಫಲಕಕ್ಕೆ ಎಷ್ಟು ಹಣ ನೀಡಲಾಗಿದೆ? ಖರೀದಿಸುವಾಗ ಯಾವ ಮಾನದಂಡ ಅನುಸರಿಸಲಾಗಿದೆ? ಈ ಬಗ್ಗೆ ಕೂಡಲೇ ಉತ್ತರ ನೀಡುವಂತೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ಧರಾಜು ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ಪಿಡಿಓ ಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಅಳಲು:
ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಈ ಹಿಂದೆ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ, ಹೊನ್ನಾವರದ ಗಣಪತಿ ಫ್ಲಕ್ಸ್ ಅಂಡ್ ಪ್ರಿಂಟರ್ಸ್‌ನವರು ಅವರಿಗೆ ಪರಿಚಯ. ಅವರ ಸೂಚನೆಯಂತೆ ನಾಮಫಲಕ ಸರಬರಾಜು ಮಾಡಿರುವ ಗುತ್ತಿಗೆದಾರರಿಗೆ ಹಣ ನೀಡಲಾಗಿದ್ದು, ದುರಂತ ಎಂದರೆ ಅವರೇ ನಮ್ಮಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಎರಡು ವರ್ಷಗಳ ಪ್ರೊಬೆಷನರಿ ಸೇವೆಯಲ್ಲಿ ಕಪ್ಪು ಚುಕ್ಕಿ ಬಂದರೆ, ಮುಂದೆ ಸೇವೆ ಸಲ್ಲಿಸುವುದು ಹೇಗೆ ಎಂದು ಹೆಸರು ಹೇಳಲು ಇಚ್ಚಿಸದ ಪಿಡಿಓ ಒಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.