ADVERTISEMENT

ನಿರಂತರ ಮಳೆ: ಒಡೆದ ಕಿರುಸೇತುವೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 6:52 IST
Last Updated 8 ಅಕ್ಟೋಬರ್ 2017, 6:52 IST
ಅರಕಲಗೂಡು ತಾಲ್ಲೂಕಿನ ಇಬ್ಬಡಿ ಬಳಿ ಹೇಮಾವತಿ ನಾಲೆ ಮೋರಿ ಒಡೆದಿದ್ದರಿಂದ ಸಂಪರ್ಕ ರಸ್ತೆ ಬಿರುಕು ಬಿಟ್ಟಿರುವುದನ್ನು ತಾ.ಪಂ. ಸದಸ್ಯ ನಿಂಗೇಗೌಡ, ಗ್ರಾ.ಪಂ. ಪ್ರಸನ್ನ ವೀಕ್ಷಿಸಿದರು
ಅರಕಲಗೂಡು ತಾಲ್ಲೂಕಿನ ಇಬ್ಬಡಿ ಬಳಿ ಹೇಮಾವತಿ ನಾಲೆ ಮೋರಿ ಒಡೆದಿದ್ದರಿಂದ ಸಂಪರ್ಕ ರಸ್ತೆ ಬಿರುಕು ಬಿಟ್ಟಿರುವುದನ್ನು ತಾ.ಪಂ. ಸದಸ್ಯ ನಿಂಗೇಗೌಡ, ಗ್ರಾ.ಪಂ. ಪ್ರಸನ್ನ ವೀಕ್ಷಿಸಿದರು   

ಅರಕಲಗೂಡು: ತಾಲ್ಲೂಕಿನಲ್ಲಿ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಇಬ್ಬಡಿ ಗ್ರಾಮದ ಬಳಿ ಹೇಮಾವತಿ ನಾಲೆಯ ಕಿರುಸೇತುವೆ ಒಡೆದು ಪಕ್ಕದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಶುಕ್ರವಾರ ರಾತ್ರಿ ಹೇಮಾವತಿ ನಾಲೆ ಹಾದು ಹೋಗಿರುವ ಇಬ್ಬಡಿ ಹಾಗೂ ಅಜ್ಜೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಿರುಸೇತುವೆ ಒಡೆದು ಸಮೀಪದ ಮಂಜು, ಯೋಗೇಶ್, ಮಂಜೇಗೌಡ ಅವರ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮುಸುಕಿನ ಜೋಳದ ರಾಶಿ ಹಾಗೂ ಹಲವು ಸಾಮಗ್ರಿಗಳು ನೀರಿನಲ್ಲಿ ಕರಗಿ ಹಾಳಾಗಿವೆ.

ಈ ಸೇತುವೆ ಇಬ್ಬಡಿ, ಅಜ್ಜೂರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಬಿರುಕು ಕಾಣಿಸಿಕೊಂಡು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.
‘ಹೇಮಾವತಿ ಜಲಾಶಯ ಯೋಜನೆ ಎಂಜಿನಿಯರ್ ನಿರ್ಲಕ್ಷ್ಯದಿಂದಾಗಿ ಕೆಲ ತಿಂಗಳ ಹಿಂದಷ್ಟೇ ನಿರ್ಮಿಸಿದ್ದ ಈ ಸೇತುವೆ ಕಳಪೆಯಾಗಿದ್ದು, ಈ ಮಳೆಗೆ ಒಡೆದು ಹೋಗಿದೆ. ಎಂಜಿನಿಯರ್ ತುರ್ತು ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತಾ.ಪಂ ಸದಸ್ಯ ನಿಂಗೇಗೌಡ, ಯಲಗತವಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಕುಮಾರ್ ಎಚ್ಚರಿಸಿದರು.

ADVERTISEMENT

ಗೋಡೆ ಕುಸಿತ: ಮಳೆಗೆ ಇಬ್ಬಡಿ ಗ್ರಾಮದ ರಾಜೇಗೌಡ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹೆಗ್ಗಡಿಹಳ್ಳಿ, ಕಾಳೇನಹಳ್ಳಿ ಬಳಿ ತೋಟಗಳು ಜಲಾವೃತವಾಗಿ ಎಲೆ ಹಂಬು, ತೋಟದ ಬೆಳೆಗಳು ನಾಶವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.