ADVERTISEMENT

ನೀರಾವರಿ, ವಿದ್ಯುತ್ ಸೌಲಭ್ಯಕ್ಕೆ ಆಗ್ರಹ

ಚನ್ನರಾಯಪಟ್ಟಣ: ರೈತ ದಿನಾಚರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 5:53 IST
Last Updated 24 ಡಿಸೆಂಬರ್ 2012, 5:53 IST

ಚನ್ನರಾಯಪಟ್ಟಣ: `ಅಗ್ಗದ ಕಾರ್ಯಕ್ರಮದ ಬದಲು ರೈತರಿಗೆ ಸಮರ್ಪಕ ವಿದ್ಯುತ್, ನೀರಾವರಿ ಸೌಲಭ್ಯ, ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು' ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್ ಹೇಳಿದರು.

ಕೃಷಿ ಇಲಾಖೆ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ `ರೈತ ದಿನಾಚರಣೆಯ ಉದ್ಘಾಟನಾ ಸಮಾರಂಭ'ದಲ್ಲಿ ಮಾತನಾಡಿದ ಅವರು, ಸಹಾಯ ಧನ ನೀಡುವುದು ತಾತ್ಕಾಲಿಕ ಪರಿಹಾರ. ಇದರಿಂದ ರೈತರ ಏಳಿಗೆ ಅಸಾಧ್ಯ. ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಒದಗಿಸಬೇಕು. ಅದೇರೀತಿ ರೈತರು ಸಹ ಇನ್ನೊಬ್ಬರನ್ನು ದೂಷಿಸುವುದನ್ನು ಬಿಟ್ಟು ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಶ್ರಮವಹಿಸಿ ದುಡಿಯಬೇಕು. ಕೃಷಿ ಜೊತೆಗೆ ಉಪಕಸುಬು ಕೈಗೊಂಡರೆ ಅರ್ಥಿಕವಾಗಿ ಮುಂದೆ ಬರಬಹುದು ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತ್ತೀಗೌಡ ಮಾತನಾಡಿ, ರೈತ ದಿನಾಚರಣೆಯನ್ನು ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಆಯೋಜಿಸದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಿ ಕೃಷಿ ವಿಜ್ಞಾನಿಗಳಿಂದ ಅಗತ್ಯ ಮಾಹಿತಿ ದೊರಕುವಂತೆ ಮಾಡಿದರೆ ರೈತರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ದೊಡ್ಡೇರಿ ಶ್ರೀಕಂಠಯ್ಯ, ಮಂಜೇಗೌಡ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಕಾಳೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಸ್. ಮಲ್ಲೇಶ್, ಪ್ರಗತಿಪರ ರೈತರಾದ ಬಸವರಾಜು, ಷಡಕ್ಷರಯ್ಯ, ರೈತ ಸಂಘದ ಮುಖಂಡರಾದ ಸಿ.ಜಿ.ರವಿ, ಬಿ.ಎಚ್. ಶಿವೇಗೌಡ, ನಂಜೇಗೌಡ, ರೇವಣ್ಣ, ವಿಜ್ಞಾನಿಗಳಾದ ಡಾ.ಪಿ.ಮಹದೇವ್, ಸಿದ್ದಲಿಂಗಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಹನುಮಯ್ಯ ಇದ್ದರು.

ರೇಷ್ಮೆ ಇಲಾಖೆ ಅಧಿಕಾರಿ ಕೃಷ್ಣಪ್ರಸಾದ್ ಸ್ವಾಗತಿಸಿದರು. ಇದಕ್ಕೂ ಮುನ್ನ `ರೈತ ರಥ'ಕ್ಕೆ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾ ಯಿತಿ ಸದಸ್ಯೆ ಕುಸಮ ಬಾಲಕೃಷ್ಣ ಚಾಲನೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.