ADVERTISEMENT

ನೈಸ್‌ ಅಕ್ರಮ ಸಿಬಿಐಗೆ ವಹಿಸಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 6:54 IST
Last Updated 8 ಅಕ್ಟೋಬರ್ 2017, 6:54 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹಾಸನ: ರಾಜ್ಯ ಸರ್ಕಾರ ನಂದಿ ಇನ್‌ ಫ್ರಾಸ್ಟ್ರಕ್ಚರ್ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಈ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುವುದು ಎಂದು ಸಂಸದ ಎಚ್‌.ಡಿ.ದೇವೇಗೌಡ ಎಚ್ಚರಿಸಿದರು.

‘ಅಕ್ರಮದ ಕುರಿತು ಆರಂಭದಲ್ಲಿ ಸಿದ್ದರಾಮಯ್ಯ, ಜಗದೀಶ ಶೆಟ್ಟರ್‌, ಕಾಗೋಡು ತಿಮ್ಮಪ್ಪ ವೀರಾವೇಶದಿಂದ ಮಾತನಾಡಿದರು. ಸದನ ಸಮಿತಿ ವರದಿ ನೀಡಿ ವರ್ಷ ಕಳೆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ಪ್ರಧಾನಿ ಮೋದಿ ಅವರನ್ನು ಖುದ್ದು ಭೇಟಿ ಮಾಡಿ ಮನವರಿಕೆ ಮಾಡಿದರೂ ಕ್ರಮ ಕೈಗೊಂಡಿಲ್ಲ. ಶಾಸಕರಿಗೆ ಸದನದಲ್ಲಿ ಪ್ರಶ್ನಿಸುವ ಆತ್ಮಸ್ಥೈರ್ಯವೂ ಇಲ್ಲ. ರೈತರ ಪರವಾಗಿ ಮತ್ತೊಮ್ಮೆ ಏಕಾಂಗಿಯಾಗಿ ಹೋರಾಟ ಮಾಡಲಾಗುವುದು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘1995ರಿಂದ 2002ರ ವರೆಗೆ ನೈಸ್‌ ಅಕ್ರಮದ ಬಗ್ಗೆ ಏನು ಗೊತ್ತಿರಲಿಲ್ಲ. ನಂತರ ರೈತರಿಂದ ವಿಷಯ ಗೊತ್ತಾಯಿತು. ಸಾಕಷ್ಟು ಬೇನಾಮಿ ವ್ಯವಹಾರ ನಡೆದಿದೆ. ರಸ್ತೆಗೆ ಸಂಬಂಧಿಸಿದ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ. ನನ್ನನ್ನೂ ಸೇರಿದಂತೆ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

ADVERTISEMENT

ಶಾಸಕ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೀರಾವೇಶದಿಂದ ಮಾತನಾಡಿದ್ದನ್ನು ಗಮನಿಸಿದ್ದೇನೆ. ಹೀಗೆ ಮಾತನಾಡಿದ್ದನ್ನು ಹಿಂದೆಂದೂ ನೋಡಿರಲಿಲ್ಲ, ಸೋಲು-ಗೆಲುವು ಆಮೇಲೆ. ನೂರಕ್ಕೆ ನೂರರಷ್ಟು ಜಿ.ಟಿ.ದೇವೇಗೌಡರೇ ಪಕ್ಷದ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.