ADVERTISEMENT

ಪರಂಪರೆಯ ಪ್ರತಿನಿಧಿ ಮಹಿಳೆ: ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 6:20 IST
Last Updated 10 ಮಾರ್ಚ್ 2014, 6:20 IST

ಹಾಸನ: ‘ಮಹಿಳೆ ಇಂದು ಆಧುನಿಕತೆಯ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಒತ್ತಡದ ನಡುವೆಯೂ ಉದ್ಯೋಗ ಹಾಗೂ ಕುಟುಂಬ ಎರಡನ್ನೂ ಸರಿದೂಗಿಸುತ್ತಿದ್ದಾಳೆ’ ಎಂದು ಮೊಸಳೆಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ್‌ ನುಡಿದರು.

ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಿಳೆಯರಂತೆ ಪುರುಷರ ಪಾಲಿಗೂ ಇದು ಸಂಭ್ರಮದ ದಿನ. ಪುರುಷರ ಜೀವನದ ಪ್ರತಿ ಹಂತದಲ್ಲಿ ಚೈತನ್ಯಶಕ್ತಿಯಾಗಿ, ಕೌಟುಂಬಿಕ ವ್ಯವಸ್ಥೆಯ ಅಡಿಗಲ್ಲಾಗಿ, ಪರಂಪರೆಯ ಪ್ರತಿನಿಧಿಯಾಗಿ ಮಹಿಳೆ ನಮ್ಮ ಸಂಸ್ಕೃತಿಯನ್ನು ಬೆಳಗಿದ್ದಾಳೆ. ಸಂಸ್ಕೃತಿಯ ಕಣ್ಣಾಗಿರುವ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವುದೆಂದರೆ ಅದು ಸಮಾಜ ತಲೆ ತಗ್ಗಿಸುವಂಥ ವಿಷಯ’ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕಿ ಸುಧಾ ‘ಆಧುನಿಕತೆಯ ಹೆಸರಿನಲ್ಲಿ ಬೆರಳೆಣಿಕೆಯ ಮಹಿಳೆಯರು ನಕಾರಾತ್ಮಕವಾಗಿ ಬೆಳೆಯುತ್ತಿದ್ದು, ಸಮಾಜದಲ್ಲಿ ಹೆಣ್ಣಿನ ಬಗೆಗೆ ವಿಕೃತ ದೃಷ್ಟಿ ಹೆಚ್ಚಾಗುತ್ತಿದೆ. ಆಧುನಿಕತೆ ಎಂದರೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಡುವುದಲ್ಲ. ಅಸಂಖ್ಯಾತ ಮಹಿಳೆಯರು ನಮ್ಮ ಸಂಸ್ಕೃತಿಯ  ಪ್ರತಿನಿಧಿ ಗಳಾಗಿಯೂ ದೊಡ್ಡ ಸಾಧನೆ ಮಾಡಿದ್ದಾರೆ. ಆ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟೇಶ್, ಅಧ್ಯಾಪಕರಾದ ಎಂ. ಮಾದೇಗೌಡ, ಕಾಂತರಾಜ್, ಎಂ.ಪಿ. ಗೋಪಾಲ್, ಉಪನ್ಯಾಸಕರಾದ ಶಿವಕುಮಾರ್, ಕರೀಗೌಡ, ಹರಿಪ್ರಸಾದ್, ಗ್ರಂಥಪಾಲಕ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.

‘ಕಾರ್ಪೊರೇಟ್‌ ಕ್ಷೇತ್ರದಲ್ಲೂ ಮಹಿಳೆಯರ ಛಾಪು’
ಹಾಸನ: ‘ಮಹಿಳೆಯರು ಇಂದು ಕುಟುಂಬದ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ ಕಾರ್ಪೊರೇಟ್‌ ವಲಯದಲ್ಲಿ ಪುರುಷರಿಗಿಂತ ಮುಂಚೂಣಿಯಲ್ಲಿ ಇದ್ದಾರೆ’ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ. ಕೆ.ಜಿ. ಕವಿತಾ ನುಡಿದರು.

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಿ.ಈ.ಜಿ. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಂಶುಪಾಲರಾದ ಎಚ್‌.ಎ. ರೇಖಾ, ಬಿ.ಈ. ಜಗದೀಶ್‌, ವೇಣುಗೋಪಾಲ್‌, ಅಜಿತ್‌ ಪ್ರಸಾದ್‌, ಸೀಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.