ADVERTISEMENT

ಪಲ್ಸ್ ಪೋಲಿಯೊ: ಜಿಲ್ಲೆಯಲ್ಲಿ ಶೇ. 91.35 ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 6:10 IST
Last Updated 16 ಏಪ್ರಿಲ್ 2012, 6:10 IST

ಹಾಸನ: ಜಿಲ್ಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಶೇ 91.35ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ಯಾಮಲಾದೇವಿ ತಿಳಿಸಿದ್ದಾರೆ.

ನಗರದಲ್ಲಿ ಬೆಳಿಗ್ಗೆ 7.30ರಿಂದ ಸಂಜೆಯವರೆಗೂ ವಿವಿಧ ಬಡಾವಣೆಗಳಲ್ಲಿ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಲಸಿಕೆಗಳನ್ನು ಹಾಕಲಾಯಿತು.

ಮುಂಜಾನೆ ಜಿಲ್ಲಾ ಆಸ್ಪತ್ರೆಯ ಮುಂದೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜ ಸೇವಕ ಶಿವಣ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್  ಮತ್ತಿತರರು ಉಪಸ್ಥಿತರಿದ್ದರು.

`ಮಕ್ಕಳ ಉತ್ತಮ ಬೆಳವಣಿಗೆಗೆ ಪೋಲಿಯೊ ಹನಿ ಹಾಕಿಸಿ~
ಆಲೂರು: ಮಕ್ಕಳ ಉತ್ತಮ ಬೆಳವಣಿಗೆಗೆ ಅನುಕೂಲವಾಗುವ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳುವಂತೆ ತಹಶೀಲ್ದಾರ್ ಎನ್.ಕೆ.ಶಾರದಾಂಬ ತಿಳಿಸಿದರು.

ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂದೆ, ತಾಯಿ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಮಾರಕ ರೋಗದಿಂದ ರಕ್ಷಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಚ್.ಬಿ.ಧರ್ಮರಾಜ್ ಮಾತನಾಡಿ, ಇದೊಂದು ಸರ್ಕಾರಿ ಕಾರ್ಯಕ್ರಮ. ಇದು ಜನಾಂದೋಲನವಾಗಿ ರೂಪುಗೊಳ್ಳಬೇಕೆಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ಭಾನುವಾರ ನಡೆದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ 8991 ಗುರಿ ಇದ್ದು, ಈ ಪೈಕಿ 8020 ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಸಿಕೆ ಹಾಕಿ ಶೇ 89 ರಷ್ಟು ಸಾಧನೆ ಮಾಡಲಾಗಿದೆ. ಹಾಗೇಯೇ ಪಟ್ಟಣದಲ್ಲಿ 976 ಗುರಿ ಇದ್ದು, ಈ ಪೈಕಿ 1006  ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ ಎಂದರು.

`ಪೋಲಿಯೊ ಲಸಿಕೆ ಕಡ್ಡಾಯ ಹಾಕಿಸಿ~
ಅರಸೀಕೆರೆ: ಪೋಲಿಯೊ ಒಂದು ಮಾರಕ ರೋಗವಾಗಿದ್ದು ಇದು ಎಳೆಯ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತದೆ. ಆದ್ದರಿಂದ ಈ ರೋಗದ ತಡೆಗೆ ಪ್ರತಿಯೊಬ್ಬ ತಂದೆ-ತಾಯಂದಿರು ತಪ್ಪದೇ ಪೋಲಿಯೊ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು ಎಂದು ಸರ್ಕಾರಿ ಜೆಸಿ ಆಸ್ಪತ್ರೆಯ ಆಡಳಿತ ಆರೋಗ್ಯಾಧಿಕಾರಿ ಡಾ.ಶೈಲಜಾ ಭಾನುವಾರ ತಿಳಿಸಿದರು.

ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ  ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ಪೋಷಕರು ತಮ್ಮ 5 ವರ್ಷದೊಳಗಿನ ಎಳೆಯ ಮಕ್ಕಳಿಗೆ ತಪ್ಪದೇ ಪೋಲಿಯೊ ಹನಿ ಹಾಕಿಸಿ ಪೋಲಿಯೊ ಮುಕ್ತ ರಾಜ್ಯವನ್ನಾಗಿ ಮಾಡಬೇಕು.

ತಾಲ್ಲೂಕಿನ ರೈಲ್ವೆ, ಬಸ್ ನಿಲ್ದಾಣಗಳು, ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೊ ಬೂತ್‌ಗಳನ್ನು ತೆರೆಯಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಂಕರಪ್ಪ, ಡಾ. ವಿಜಯೇಂದ್ರ, ರೋಟರಿ ಕ್ಲಬ್ ಅಧ್ಯಕ್ಷ ರಾಕೇಶ್, ಸದಸ್ಯರಾದ ಮಹಮ್ಮದ್‌ಖುರೇಷಿ, ಬಿ.ಎಸ್. ಲಕ್ಷ್ಮಣರಾವ್ ಹಾಜರಿದ್ದರು.

`ಪೋಲಿಯೊ ಲಸಿಕೆಯಿಂದ ಅಂಗವಿಕಲತೆ ನಿವಾರಣೆ~
ಚನ್ನರಾಯಪಟ್ಟಣ: ಅಂಗವಿಕಲತೆಯನ್ನು ನಿವಾರಿಸಬೇಕಾದರೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ ಭಾನುವಾರ ಇಲ್ಲಿ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ `ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ~ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ರೋಗ ಹರಡದಂತೆ ತಡೆಯಲು ಲಸಿಕೆ ಹಾಕಿಸಬೇಕು ಎಂದು ನುಡಿದರು.

ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್.ಅಶೋಕ್ ಮಾತನಾಡಿದರು. ಫೆಬ್ರುವರಿ 19 ರಂದು ನಡೆದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಶೇ. 94 ರಷ್ಟು ಸಾಧನೆ ಮಾಡಲಾಗಿದೆ.

ಈ ಬಾರಿ 30,783 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ತಾಲ್ಲೂಕಿನಾದ್ಯಂತ 138 ಕೇಂದ್ರ ತೆರೆಯಲಾಗಿದ್ದು, 556 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ. ನಂಜೇಗೌಡ ಮಾಹಿತಿ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಆರ್. ಹಿರಣ್ಣಯ್ಯ, ಮೂಳೆ ತಜ್ಞ ಡಾ.ವಿ. ಮಹೇಶ್ ಇದ್ದರು.

ಶೇ 91 ಮಕ್ಕಳಿಗೆ ಪೋಲಿಯೊ ಲಸಿಕೆ
ರಾಮನಾಥಪುರ: ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ ಗಂಗೂರು, ಬೆಳವಾಡಿ. ರಾಮನಾಥಪುರ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಪ್ರಯುಕ್ತ ಶೇ. 91ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಬಸವಾಪಟ್ಟಣದ ಪಿ.ಎಚ್.ಸಿ.ಯಲ್ಲಿ 5 ವರ್ಷ ಒಳಪಟ್ಟು 450 ಮಕ್ಕಳಲ್ಲಿ 420 ಮಂದಿ, ಬೆಳವಾಡಿ ಆಸ್ಪತ್ರೆ 380- 350, ಗಂಗೂರು ಆಸ್ಪತ್ರೆ 421- 400 ಹಾಗೂ ರಾಮನಾಥಪುರ ಸರ್ಕಾರಿ ಆಸ್ಪತ್ರೆ ವ್ಯಾಪ್ತಿ 572 ಮಕ್ಕಳಲ್ಲಿ 542 ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.

ರಾಮನಾಥಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಆಯುವೇರ್ದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮೋಹನ್, ಡಾ. ರಾಜೇಶ್, ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸೌಮ್ಯ, ಗಂಗೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಧು ಹಾಗೂ ಬೆಳವಾಡಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಲೋಕೇಶ್ ಅವರು ಮಕ್ಕಳಿಗೆ ಪೋಲಿಯೊ ಹನಿ ಹಾಕಿದರು. ಇದಕ್ಕೆ ಆಸ್ಪತ್ರೆಯ ಶುಶ್ರೂಷಕಿಯರು ಸಹಕರಿಸಿದರು.

`ಪೋಲಿಯೋ ಮುಕ್ತ ರಾಷ್ಟ್ರವಾಗಿ ಮಾಡಲು ಸಹಕರಿಸಿ~
ಹೊಳೆನರಸೀಪುರ: ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಆರೋಗ್ಯ ಇಲಾಖೆ ಮತ್ತು ರೋಟರಿ ಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ನಾವು ಶೇಕಡ 99 ರಷ್ಟು ಯಶಸ್ಸನ್ನು ಸಾಧಿಸಿದ್ದೇವೆ. ನಮ್ಮ ದೇಶವನ್ನು ಪೋಲಿಯೋಮುಕ್ತ ರಾಷ್ಟ್ರವನ್ನಾಗಿ ಮಾಡಲು ಭಾರತೀಯರೆಲ್ಲರೂ ಸಹಕಾರ ನೀಡಬೇಕು~ ಎಂದು ತಹಶೀಲ್ದಾರ್ ವಿ. ಮಂಜುನಾಥ್ ನುಡಿದರು.

ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಮಗುವಿಗೆ ಲಸಿಕೆ ಹಾಕುವ ಮೂಲಕ ಎರಡನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ತಾಲ್ಲೂಕಿನಲ್ಲಿ 5 ವರ್ಷದೊಳಗಿನ ಮಕ್ಕಳು ಸುಮಾರು 21 ಸಾವಿರದಷ್ಟಿದ್ದು, ಕಳೆದ ಬಾರಿ ಶೇ 99.8 ರಷ್ಟು ಗುರಿಯನ್ನು ಸಾಧಿಸಿದ್ದೆವು. ಈ ಬಾರಿ ಶೇ 100 ರಷ್ಟು ಸಾಧನೆ ಮಾಡುವ ಉದ್ದೇಶ ಹೊಂದಿದ್ದು, 91 ಬೂತ್‌ಗಳನ್ನು ಮಾಡಿದ್ದೇವೆ~ ಎಂದು ವಿವರಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಯೋಗೇಶ್ ಮಾತನಾಡಿ, ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಮಾಡಲು ರೋಟರಿ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು. ಕಾರ್ಯದರ್ಶಿ ರಾಮದಾಸ್, ವಿಜಯಕುಮಾರ್, ಡಾ. ಹನುಮಂತಪ್ಪ ಇದ್ದರು.

ಪೋಲಿಯೊ ನಿಯಂತ್ರಿಸಲು ಸಂಕಲ್ಪ ತೊಡಲು ಸಲಹೆ
ಜಾವಗಲ್: ಪೋಲಿಯೊ ನಿಯಂತ್ರಿಸಲು ಪ್ರತಿಯೊಬ್ಬರು ಸಂಕಲ್ಪ ಪಡಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಧನಂಜಯ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿ ಬೂತ್‌ನಲ್ಲಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿ ಮಾತನಾಡಿದ ಅವರು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ತಿಳಿಸಿದರು. 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಪಂಚಾಯತಿ  ಸದಸ್ಯೆ ಲಕ್ಷ್ಮೀ ರವಿಶಂಕರ್ ಮಕ್ಕಳಿಗೆ ಪೋಲಿಯೊ ಹನಿ ಹಾಕಿದರು. ಡಾ.ಗೀತಾ, ಡಾ.ಪ್ರೇಮಾನಂದ್,  ರಾಜಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.