ADVERTISEMENT

ಪಶು ವೈದ್ಯರ ಗೈರು ಹಾಜರಿಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 9:00 IST
Last Updated 17 ಮಾರ್ಚ್ 2011, 9:00 IST

ಚನ್ನರಾಯಪಟ್ಟಣ: ಕರ್ತವ್ಯಕ್ಕೆ ಸತತವಾಗಿ ಗೈರು ಹಾಜರಾಗುತ್ತಿರುವ ಶ್ರವಣಬೆಳಗೊಳದ ಪಶು ಆಸ್ಪತ್ರೆಯ ಪಶು ಸಹಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನ ಇತರ ಕಡೆಯೂ ಪಶು ಆಸ್ಪತ್ರೆಯ ವೈದ್ಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ತಾ.ಪಂ. ಸದಸ್ಯರು ಬುಧವಾರ ದೂರಿದರು.

ತಾ.ಪಂ. ಅಧ್ಯಕ್ಷೆ ವಿಜಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪಿ.ಕೆ. ಮಂಜೇಗೌಡ, ಶ್ರವಣಬೆಳಗೊಳದ ಪಶು ಆಸ್ಪತ್ರೆಯ ಸಹಾಯಕ ಕಳೆದ 2 ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಅಸಮಾಧಾನಗೊಂಡರು.

ಇದಕ್ಕೆ ದನಿಗೂಡಿಸಿದ ಸದಸ್ಯರಾದ ಕೆ.ಎನ್. ಗಂಗಾಧರ್, ರವಿಕುಮಾರ್, ತಾಲ್ಲೂಕಿನ ಹಲವು ಕಡೆ ಪಶು ವೈದ್ಯರ ಬಗ್ಗೆ ದೂರುಗಳು ಕೇಳಿ ಬಂದಿವೆ. ಸಮರ್ಪಕ ಔಷಧಿ ವಿತರಿಸುತ್ತಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಹಿರೀಸಾವೆ ಹೋಬಳಿಯ ಆಯರಹಳ್ಳಿಯಲ್ಲಿ 2 ಹಸುಗಳು ಮೃತಪಟ್ಟವು. ರಾಸುಗಳ ಸಂಖ್ಯೆಗೆ ಅನುಸಾರ ಅಗತ್ಯ ಲಸಿಕೆ ವಿತರಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಯ ಮಾಹಿತಿ ತಿಳಿಸುಲು ನಾಮಫಲಕದಲ್ಲಿ ಪ್ರಕಟಿಸಬೇಕು ಎಂದು ಸದಸ್ಯ ಬಿ.ಎಸ್. ಮಲ್ಲೇಶ್ ಸಲಹೆ ನೀಡಿದರು. ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ರಮೇಶ್‌ಕುಮಾರ್ ಮಾತನಾಡಿ, ಶ್ರವಣಬೆಳಗೊಳ ಪಶು ಆಸ್ಪತ್ರೆಯ ಸಹಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದು ವೈ.ಬಿ. ದೇವೇಗೌಡ, ಮಂಜೇಗೌಡ  ಸಲಹೆ ನೀಡಿದರು.ಸೆಸ್ಕ್ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ ಸದಸ್ಯರು, ಗ್ರಾಹಕರಿಂದ ಲಂಚ ಪಡೆಯದೆ ಯಾವುದೇ ಕೆಲಸ ಮಾಡುತ್ತಿಲ್ಲ. ಜುಟ್ಟನಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ತಿಂಗಳು ಕಳೆದರೂ ದುರಸ್ತಿ ಮಾಡಿಸಿಲ್ಲ. ವಿದ್ಯುತ್ ಕೈ ಕೊಟ್ಟಾಗ, ದೂರವಾಣಿ ಕರೆ ಮಾಡಿದರೆ ಲೈನ್‌ಮೆನ್‌ಗಳು ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು.
ಬಾಗೂರಿನಲ್ಲಿ ಗ್ರಾಮೀಣ ಸಾರಿಗೆ ಆರಂಭಿಸಬೇಕು ಎಂದು ಸದಸ್ಯ ಎನ್. ಬಸವರಾಜು ಮನವಿ ಮಾಡಿದರು.

ಅಧ್ಯಕ್ಷೆ ವಿಜಯ ಮಾತನಾಡಿ, ಅಧಿಕಾರಿಗಳು ಸಾಮಾನ್ಯ ಸಭೆಯಿಂದ ಹೊರ ಹೋಗುವುದು ತರವಲ್ಲ. ಸಾಮಾನ್ಯ ಸಭೆಯಲ್ಲಿ 2 ಗಂಟೆ ಕುಳಿತುಕೊಳ್ಳದವರು ರೈತರ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಪಾಧ್ಯಕ್ಷ ಮಂಜೇಗೌಡ, ತಾ.ಪಂ. ಇಓ ಕೆ.ಬಿ. ನಿಂಗರಾಜಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.