ADVERTISEMENT

ಪಾಳು ಬಿದ್ದ ಕಟ್ಟಡ: ನೀರಿಗೂ ಬರ!

ಹಿ.ಕೃ.ಚಂದ್ರು
Published 3 ಜುಲೈ 2013, 7:49 IST
Last Updated 3 ಜುಲೈ 2013, 7:49 IST
ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಗಳ ಸ್ಥಿತಿ
ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಗಳ ಸ್ಥಿತಿ   

ಹಿರೀಸಾವೆ: ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನವಿರುವ ಕಬ್ಬಳಿ ಗ್ರಾಮದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಾಗಿದ್ದ ಕಟ್ಟಡಗಳು ಹಾಳು ಬಿದ್ದಿವೆ.

1500 ಜನಸಂಖ್ಯೆ, 500 ಮನೆಗಳಿರುವ ಕಬ್ಬಳಿ ಹಿರೀಸಾವೆ ಹೋಬಳಿ ಗ್ರಾಮ ಪಂಚಾಯಿತಿಗಳಲ್ಲಿ ಅತಿ ದೊಡ್ಡದು. ಆದರೆ ಇದು ಸಮಸ್ಯೆಗಳನ್ನೆ ಹೊದ್ದು ಮಲಗಿದೆ. ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟನೆಯಾಗಿ ಹಲವು ತಿಂಗಳೇ ಕಳೆದಿದ್ದರೂ ಬೀಗ ತೆಗೆದಿಲ್ಲ, ಹಲವು ವರ್ಷಗಳ ಹಿಂದೆ ಕಟ್ಟಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಸುತ್ತ ಗಿಡಗಳು ಬೆಳೆದು ಕ್ರಿಮಿಕೀಟಗಳ ವಾಸ ಸ್ಥಾನವಾಗಿದೆ. 

ಗ್ರಾಮದ ಬಹುತೇಕ ಕೊಳವೆ ಬಾವಿಗಳು ಬತ್ತಿವೆ. ಮೂರು ವರ್ಷ ಹಿಂದೆ ನಿರ್ಮಿಸಿದ ಕಿರು ನೀರು ಸರಬರಾಜು ಟ್ಯಾಂಕ್‌ಗಳಿಗೆ ಇದುವರೆಗೆ ನೀರು ಬಂದಿಲ್ಲ. ಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಯು ಮೂರು ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಮಾಡಿಸಿದ್ದರು. ಆದರೆ ಇದುವರೆಗೆ ಗ್ರಾಮ್ಕಕೆ ನೀರು ಬಂದಿಲ್ಲ ಎನ್ನುತ್ತಾರೆ ಗ್ರಾಮ ಯುವಕರು. ಗ್ರಾಮದ ಹಲವು ಬೀದಿಗಳಲ್ಲಿ ಚರಂಡಿ ಇಲ್ಲದೆ  ಕೊಳಚೆ ನೀರು ನಿಂತಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ದೊಡ್ಡ ಚರಂಡಿ ಸೇರಿದಂತೆ ಯಾವುದೇ ಚರಂಡಿ ಸ್ವಚ್ಛತೆ ಕಂಡು ವರ್ಷಗಳೇ ಕಳೆದಿವೆ. ಕೆಲವು ಬೀದಿಗಳು ಡಾಂಬರ್, ಸಿಮೆಂಟ್ ಕಂಡಿಲ್ಲ.

ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಕಾವೇರಿ ಗ್ರಾಮೀಣ ಬ್ಯಾಂಕ್, ಅಂಚೆ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಕಿರಿಯ ಮಹಿಳಾ ಆರೋಗ್ಯ ಕೇಂದ್ರಗಳಿವೆ. ಆಸ್ಪತ್ರೆಗೆ 8 ಕಿ.ಮೀ. ದೂರ ಹೋಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸದರು ಇದುವರೆ ಯಾರು ಗಮನಹರಿಸಿಲ್ಲ ಎಂದು ಗ್ರಾಮದ ಮಹಿಳೆಯರು ದೂರುತ್ತಾರೆ.

ತಾಲ್ಲೂಕೂ ಕೇಂದ್ರದಿಂದ 30 ಕಿ.ಮೀ. ದೂರದ ಕಬ್ಬಳಿಯಿಂದ ಬೇರೆ ಊರುಗಳಿಗೆ ಹೋಗಲು ಬಸ್ ವ್ಯವಸ್ಥೆ ಸಮಪರ್ಕವಾಗಿಲ್ಲ. ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಆಟೋಗಳನ್ನೆ ಅವಳಂಬಿಸಬೇಕು. ಗ್ರಾಮದ ಅಭಿವೃದ್ಧಿಗೆ ರಾಜಕೀಯ ಮೇಲಾಟವೇ ಪ್ರಮುಖ ಕಾರಣ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.