ADVERTISEMENT

ಪುಟಾಣಿಗಳ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 7:00 IST
Last Updated 14 ಸೆಪ್ಟೆಂಬರ್ 2013, 7:00 IST

ಅರಕಲಗೂಡು: ಪಟ್ಟಣದ ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿತ್ತು.

ಮಕ್ಕಳ ಪ್ರತಿಭೆ ಪ್ರದರ್ಶನಕ್ಕಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ನೈಜ ಪ್ರತಿಭೆ ಪ್ರದರ್ಶಿಸಿದರು.

ಕೆಲವರು ಮಣ್ಣಿನಲ್ಲಿ ಗಣಪತಿ, ನವಿಲು, ಸಿಂಹ ಮುಂತಾದ ಪ್ರಾಣಿಗಳ ಪ್ರತಿಕೃತಿ ರಚಿಸಿದರೆ, ಬಾಲಕಿಯರು ರಂಗೋಲಿ ಕಲೆಯನ್ನು ಪ್ರದರ್ಶಿಸಿದರು. ಚಿತ್ರ ರಚನೆ, ಅಡುಗೆ ತಯಾರಿ, ಪ್ರಬಂಧ, ಭಾಷಣ, ಛದ್ಮವೇಷ, ನೃತ್ಯ, ಗಾಯನ, ಏಕಪಾತ್ರಾಭಿನಯ ಹೀಗೆ ಎಲ್ಲ ಪ್ರಕಾರಗಳಲ್ಲೂ ಮಕ್ಕಳು ತಮ್ಮ ವಿಭಿನ್ನಯನ್ನು ಪ್ರತಿಭೆ ಮೆರೆದು ನೋಡುಗರನ್ನು  ನಿಬ್ಬೆರಗಾಗುವಂತೆ ಮಾಡಿದರು.

ಪ್ರತಿಭೆ ಎಂಬುದು ದೇವರು ನೀಡಿದ ಕೊಡುಗೆಯಾಗಿದೆ. ಪ್ರತಿಯೊಬ್ಬರಲ್ಲೂ ತನ್ನದೇ ಆದ ಪ್ರತಿಭೆ ಇದ್ದು, ಅದು ಬೆಳಕಿಗೆ ಬರಲು ಸೂಕ್ತ ಅವಕಾಶ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರತಿಭಾ ದಿನಾಚರಣೆ ನಡೆಸುತ್ತಿರುವುದಾಗಿ  ಶಾಲೆಯ ಮುಖ್ಯ ಶಿಕ್ಷಕ ಫಾ. ಬಿಜು ಹಾಗೂ  ದೈಹಿಕ ಶಿಕ್ಷಕ ನಂಜೇಗೌಡ ತಿಳಿಸಿದರು.

ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪ್ರತಿ ತರಗತಿಗೆ ತಲಾ ನಾಲ್ಕು ತಂಡಗಳನ್ನು ರಚಿಸಿ ಅವರಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು. ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ ಮಾದರಿಯಲ್ಲಿ ಇದನ್ನು ನಡೆಸಿಕೊಂಡು ಬರಲಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದ್ದು,  ಪೋಷಕರಿಂದಲೂ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೂ  ಆಡಳಿತ ಮಂಡಳಿ ವತಿಯಿಂದ ಬಹುಮಾನ ಕೊಟ್ಟು ವಿದ್ಯಾರ್ಥಿಗಳನ್ನು ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.