ADVERTISEMENT

ಪುರಸಭೆ ಕಾರ್ಯಾಚರಣೆ: ಕಟ್ಟಡ ನೆಲಸಮ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 8:05 IST
Last Updated 22 ಜೂನ್ 2012, 8:05 IST

ಹಾಸನ: ನಗರದ ಹುಣಸಿನಕೆರೆ ಬಡಾವಣೆಯಲ್ಲಿ ನಗರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವೊಂದನ್ನು ಗುರುವಾರ ಬೆಳಿಗ್ಗೆ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ.

ಈ ಕಟ್ಟಡ ಹಲವು ವರ್ಷಗಳ ಹಿಂದೆಯೇ ನಿರ್ಮಾಣವಾಗ್ದ್ದಿದು, ಒಂದು ಭಾಗವನ್ನು ಸ್ತ್ರೀಶಕ್ತಿ ಸಂಘವೊಂದಕ್ಕೆ ಬಾಡಿಗೆಗೆ ನೀಡಲಾಗಿತ್ತು. ಇನ್ನೊಂದು ಭಾಗವನ್ನು ಗೋದಾಮಿನಂತೆ ಬಳಸಿಕೊಳ್ಳಲಾಗುತ್ತಿತ್ತು.

ಗುರುವಾರ ಬೆಳಿಗ್ಗೆ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದಿದ್ದ ನಗರಸಭೆಯ ಸಿಬ್ಬಂದಿ ಕಟ್ಟಡವನ್ನು ನೆಲಸಮ ಮಾಡಿದ್ದಾರೆ. `ವಾರ್ಡ್‌ನ ಸದಸ್ಯ ಬಂಗಾರಿ ಮಂಜು (ಬಿಜೆಪಿ) ಅವರೇ ಅಕ್ರಮವಾಗಿ ಈ ಕಟ್ಟಡ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದರು~ ಎಂದು ಸ್ಥಳೀಯರು ನುಡಿದಿದ್ದಾರೆ.

ಬುಧವಾರ ಕಾಂಗ್ರೆಸ್ ಸದಸ್ಯ ಯಶವಂತ್ ಅವರು ಪತ್ರಿಕಾಗೋಷ್ಠಿ ನಡೆಸಿ ನಗರಸಭೆಯ ಕಾರ್ಯ ವೈಖರಿಯನ್ನು ಟೀಕಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಯಶವಂತ್ ಜತೆಯಲ್ಲಿ ಬಂಗಾರಿ ಮಂಜು ಅವರೂ ಪಾಲ್ಗೊಂಡು, ಅವರೂ ನಗರಸಭೆಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ನಗರಸಭೆ ವಿರುದ್ಧ ಆರೋಪ ಮಾಡಿದ ಮರುದಿನ ಮುಂಜಾನೆಯೇ ಈ ಕಟ್ಟಡ ನೆಲಸಮ ಮಾಡಿದ ಘಟನೆಗಳಿಗೆ ಈಗ ಸಂಬಂಧ ಕಲ್ಪಿಸಲಾಗುತ್ತಿದೆ.

ಗುರುವಾರ ಕಟ್ಟಡ ನೆಲಸಮವಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅಧ್ಯಕ್ಷ ಶಂಕರ್, `ಪ್ರಭಾವಿ ವ್ಯಕ್ತಿಯೊಬ್ಬರು ಆ ಕಟ್ಟಡ ನಿರ್ಮಿಸಿದ್ದರು. ಅಕ್ರಮ ಕಟ್ಟಡವಾಗಿರುವುದರಿಂದ ನೆಲಸಮ ಮಾಡಿದ್ದೇವೆ~ ಎಂದಿದ್ದಾರೆ. ಬಂಗಾರಿ ಮಂಜು ಅವರ ಹೆಸರನ್ನು ಉಲ್ಲೇಖಿಸದೆ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.