ADVERTISEMENT

ಪೆನ್‌ಶನ್ ಮೊಹಲ್ಲಾ: ಪೊಲೀಸರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 7:13 IST
Last Updated 4 ಡಿಸೆಂಬರ್ 2012, 7:13 IST

ಹಾಸನ: ಪ್ರೌಢಶಾಲಾ ಶಿಕ್ಷಕನ ವಿರುದ್ಧ ಪಾಲಕರು ಆರಂಭಿಸಿದ ಪ್ರತಿಭಟನೆ, ಪೊಲೀಸರ ವಿರುದ್ಧ ತಿರುಗಿ, ಒಂದೆರಡು ಬಾರಿ ಲಾಠಿ ಪ್ರಹಾರವೂ ನಡೆದ ಪರಿಣಾಮ ನಗರದ ಪೆನ್‌ಶನ್ ಮೊಹಲ್ಲಾ ಠಾಣೆಯ ಆಸುಪಾಸಿನಲ್ಲಿ ಸೋಮವಾರ ಬಿಗುವಿನ ವಾತಾವರಣ    ನಿರ್ಮಾಣವಾಗಿತ್ತು.

ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಶಾಸಕರು, ಜನಪ್ರತಿನಿಧಿ ಗಳು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದರೂ, ಕತ್ತಲಾದಾಗ ಒಂದು ಗುಂಪು ಡಿವೈಎಸ್‌ಪಿ ಮಾರ್ಟಿನ್ ಅವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ.

ಹಿನ್ನೆಲೆ: ಸಂತೆಪೇಟೆ ವಲ್ಲಭಬಾಯಿ ರಸ್ತೆ ಸರ್ಕಾರಿ ಪ್ರೌಢಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಗೆ ಶಿಕ್ಷಕ ರಾಜಪ್ಪ (48) ಕಳೆದ ಗುರುವಾರ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾ ಗಿದೆ. ಈ ಸಂದರ್ಭದಲ್ಲಿ ಇನ್ನೊಬ್ಬ ವಿದ್ಯಾರ್ಥಿನಿ ಅದನ್ನು ಗಮನಿಸಿದ್ದರಿಂದ ವಿಚಲಿತ ನಾದ ಶಿಕ್ಷಕ, ನೋಡಿದ ವಿದ್ಯಾರ್ಥಿನಿಯನ್ನು ಚೆನ್ನಾಗಿ ಥಳಿಸಿ, ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಆದರೆ ಕಿರುಕುಳ ಅನುಭವಿಸಿದ ವಿದ್ಯಾ ರ್ಥಿನಿ ವಿಚಾರವನ್ನು ಶಾಲೆಯ ಒಬ್ಬ ಶಿಕ್ಷಕಿಗೆ ತಿಳಿಸಿದಳು.

ವಿಚಾರ ಬಾಲಕಿಯ ಮನೆಯವರಿಗೆ ಭಾನುವಾರ ತಿಳಿದಿದ್ದರಿಂದ, ಸೋಮ ವಾರ ನೂರಾರು ಜನರು ಬಂದು ಶಾಲೆಗೆ ಮುತ್ತಿಗೆ ಹಾಕಿ, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಸಬ್‌ಇನ್‌ಸ್ಪೆಕ್ಟರ್ ಮೋಹನ್ ಕುಮಾರ್, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪ್ರತಿಭಟನೆಗೆ ಬಂದಿದ್ದ ಸಯ್ಯದ್ ಜಮೀರ್ ಹಾಗೂ ಸಲ್ಮಾನ್ ಎಂಬವವರನ್ನು ಥಳಿಸಿದರು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪೊಲೀಸರು ಪ್ರತಿಭಟನಾಕಾರರನ್ನು ಥಳಿಸಿದ್ದನ್ನು ಖಂಡಿಸಿ ಜನರು ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿ ಪೊಲೀಸರ ಜತೆಗೆ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಮೋಹನ್ ಕುಮಾರ್ ಮತ್ತೊಮ್ಮೆ ಲಾಠಿ ಪ್ರಹಾರ ನಡೆಸಿದರು. ಒಮ್ಮಿಂದೊಮ್ಮೆಲೇ ಲಾಠಿ ಬೀಸಿದ್ದರಿಂದ ಗಾಬರಿಯಾದ ನೂರಾರು ಜನರು ಚಲ್ಲಾಪಿಲ್ಲಿಯಾಗಿ ಓಡಿದರು. ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನ ಗಳು ನೆಲಕ್ಕೆ ಉರುಳಿದವು. ಅನೇಕ ಮಂದಿ ಚಪ್ಪಲಿಗಳನ್ನೂ ಬಿಟ್ಟು ಓಡಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಸದಸ್ಯ ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್, ಪಾಲಕರು ಹಾಗೂ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರಕರಣ ಮುಚ್ಚಲು ಪ್ರಯತ್ನ: ಕಳೆದ ಗುರುವಾರ ಶಾಲೆಯಲ್ಲಿ ಕಿರುಕುಳದ ಪ್ರಕರಣ ನಡೆದಿತ್ತು. ಕಿರುಕುಳ ಅನುಭವಿಸಿದ ಬಾಲಕಿ ಆ ವಿಚಾರವನ್ನು ಒಬ್ಬ ಶಿಕ್ಷಕಿಗೆ ತಿಳಿಸಿದ್ದರು. ಒಂದೆರಡು ದಿನದಲ್ಲಿ ಶಿಕ್ಷಣ ಇಲಾಖೆಯವರೆಗೂ ವಿಚಾರ ತಲುಪಿದೆ. ಬಳಿಕ ಇಲಾಖಾ ತನಿಖೆ ನಡೆಸುವಂತೆ ಒಬ್ಬರನ್ನು ನೇಮಕ ಮಾಡಲಾಗಿತ್ತು.

ಬಾಲಕಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಶಿಕ್ಷಕ ಕಿರುಕುಳ ನೀಡಿದ್ದು ಸಾಬೀತಾಗಿದ್ದರೂ, ಇಲಾಖಾ ತನಿಖೆ ನಡೆಸಲು ಬಂದಿದ್ದ ಅಧಿಕಾರಿಯೂ ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು ಎಂದು ಬಾಲಕಿಯ ಸಂಬಂಧಿಗಳು ಆರೋಪಿಸಿದ್ದಾರೆ.

ವಿಚಾರಣೆ ನಡೆಸಿದ ಅಧಿಕಾರಿ ಮಕ್ಕಳಿಗೆ ತಲಾ 10 ರೂಪಾಯಿ ನೀಡಿ ಈ ವಿಚಾರವನ್ನು ಯಾರಿಗೂ ತಿಳಿಸಬೇಡಿ ಎಂದು ಒತ್ತಾಯಿಸಿದ್ದರು. ಮಕ್ಕಳು ಮನೆಗೆ ಬಂದು ಈ ವಿಚಾರವನ್ನೂ ತಿಳಿಸಿದ್ದಾರೆ ಎಂದು ಮನೆಯವರು ಹೇಳಿದರು. ಸೋಮವಾರ ಸಂಜೆ ಈ ಅಧಿಕಾರಿಯನ್ನೂ ಠಾಣೆಗೆ ಕರೆಸಲಾಗಿತ್ತು. ರೊಚ್ಚಿಗೆದ್ದ ಜನರು ಒಂದು ಹಂತದಲ್ಲಿ ಈ ಅಧಿಕಾರಿಯನ್ನು ಥಳಿಸುವ ಪ್ರಯತ್ನ ಮಾಡಿ ದರು. ಆದರೆ ಪೊಲೀಸರು ಇವರಿಗೆ ರಕ್ಷಣೆ ನೀಡಿದರು ಎನ್ನಲಾಗಿದೆ.

ಸ್ಥಳಕ್ಕೆ ಬಂದಿದ್ದ ಡಿವೈಎಸ್‌ಪಿ ಯಡಾ ಮಾರ್ಟಿನ್, ಬಾಲಕಿಯ ಮನೆಯವರು ಹಾಗೂ ಕಿರುಕುಳ ಅನುಭವಿಸಿದ ಬಾಲಕಿ ಯನ್ನು ಕರೆದು ಹೇಳಿಕೆ ಪಡೆದಿದ್ದಾರೆ.
ಅನೇಕ ಮಂದಿ ತಮ್ಮ ದ್ವಿಚಕ್ರ ವಾಹನಗಳನ್ನು ಠಾಣೆ ಆಸುಪಾಸಿನಲ್ಲಿ ಬಿಟ್ಟು ಹೋಗಿದ್ದಾರೆ. ಪೊಲೀಸರು ಎಲ್ಲ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.