ADVERTISEMENT

ಫಲಾನುಭವಿ ಆಯ್ಕೆಯಲ್ಲಿ ಅಕ್ರಮ: ಏ.11ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 9:55 IST
Last Updated 8 ಏಪ್ರಿಲ್ 2011, 9:55 IST

ಅರಕಲಗೂಡು : ಬಸವ ಇಂದಿರಾ ಆವಾಸ್ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮಗಳು ನಡೆದಿದ್ದು, ಇದನ್ನು ರದ್ದುಪಡಿಸಿ ಹೊಸದಾಗಿ ಆಯ್ಕೆ ನಡೆಸುವಂತೆ ಆಗ್ರಹಿಸಿ ಏ. 11 ರಂದು ಹಾಸನದ ಜಿ.ಪಂ. ಕಚೇರಿ ಮುಂದೆ ಧರಣಿ ನಡೆಸುವುದಾಗಿ ತಾ.ಪಂ. ಅಧ್ಯಕ್ಷ ಸಂತೋಷ್ ಗೌಡ ತಿಳಿಸಿದರು. ವಸತಿ ಸಮಿತಿ ತಯಾರಿಸಿರುವ ಪಟ್ಟಿಯಲ್ಲಿ ಅನರ್ಹರು, ಶಾಸಕರ ಬೆಂಬಲಿಗರೆ ತುಂಬಿದ್ದು,  ನಿಜವಾದ ಬಡವರಿಗೆ ಅನ್ಯಾಯವಾಗಿದೆ. ಇಓ ನಾಗರಾಜ್ ಬೇಜವಾಬ್ದಾರಿ ವರ್ತನೆಯೂ ಇದಕ್ಕೆ ಕಾರಣವಾಗಿದೆ ಎಂದು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾಗುವ ಹಿಂದಿನ ದಿನ ವಸತಿ ಯೋಜನೆಯ ಜಾಗೃತ ಸಮಿತಿ ಸಭೆ ನಡೆದು ಆಯ್ಕೆ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ವಾಸ್ತವವಾಗಿ ಈ ಸಭೆ ನಡೆದೇ ಇಲ್ಲ, ನಡೆದಿದ್ದರೂ 5 ಜನ ಸದಸ್ಯರಲ್ಲಿ  ಇಬ್ಬರು ಮಾತ್ರ ಹಾಜರಿದ್ದ ಈ ಸಭೆ ಬಹುಮತವಿಲ್ಲದ ಕಾರಣ ಅಸಿಂಧುವಾಗಿದೆ ಎಂದರು. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ನಡೆದು ಗ್ರಾ.ಪಂ. ಹಾಗೂ ತಾ.ಪಂ. ಸಭೆಗಳಲ್ಲಿ ಅನುಮೋದಿಸಿದ ನಂತರ ಜಾಗೃತ ಸಮಿತಿ ಸಭೆ ನಡೆಸಿ ಅಂತಿಮ ರೂಪ ಕೊಡಬೇಕಿರುವುದು ನಿಯಮ. ಅರ್ಹರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದರು.

ಗ್ರಾ. ಪಂ.ಗಳಿಗೆ ವಸತಿಗಳ ಗುರಿ ನಿಗದಿಗೊಳಿಸಿಲ್ಲ, ಒಂದು ಗ್ರಾ.ಪಂ. ಗೆ 10 ಮನೆ ನೀಡಿದ್ದರೆ ಇನ್ನೊಂದು ಗ್ರಾ.ಪಂ.ಗೆ 68 ಮನೆ ನೀಡಲಾಗಿದ್ದು, ಮಧ್ಯವರ್ತಿಗಳು ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಲು 3 ರಿಂದ 4 ಸಾವಿರ ಹಣ ಪಡೆದಿರುವ ನಿದರ್ಶನಗಳಿವೆ ಎಂದು ದೂರಿದರು. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಕಳೆದ ತಾ.ಪಂ. ಸಭೆಯಲ್ಲಿ ತನಿಖಾ ತಂಡ ರಚಿಸಿ ಫಲಾನುಭವಿಗಳ ಆಯ್ಕೆ ಬಗ್ಗೆ ತನಿಖೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.
 

ಇಓ ರಚಿಸಿರುವ ತಂಡವೂ ಅಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿರುವುದಾಗಿ ಹೇಳಿದರು. ಅಕ್ರಮಗಳು ನಡೆಯಲು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ನೇರ ಹೊಣೆಯಾಗಿದ್ದಾರೆ ಎಂದರು. ತಾ.ಪಂ. ಉಪಾಧ್ಯಕ್ಷೆ ಆಶಾ, ಸದಸ್ಯರಾದ ಎಂ.ಎಸ್. ಯೋಗೇಶ್, ದೇವರಾಜೇಗೌಡ, ವಿರೇಶ್,  ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT