ADVERTISEMENT

ಫಸಲಿಗೆ ಬಂದ ಬೆಳೆಗಳಿಗೆ ರೋಗಬಾಧೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:42 IST
Last Updated 21 ಅಕ್ಟೋಬರ್ 2017, 6:42 IST
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಾಳು ಮೆಣಸು ಬಳ್ಳಿ ರೋಗಕ್ಕೆ ತುತ್ತಾಗಿರುವುದು
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಾಳು ಮೆಣಸು ಬಳ್ಳಿ ರೋಗಕ್ಕೆ ತುತ್ತಾಗಿರುವುದು   

ಹೆತ್ತೂರು: ಹೋಬಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ, ಕಾಳುಮೆಣಸು, ಅಡಕೆ, ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳಲ್ಲಿ ಮತ್ತೆ ರೋಗದ ಲಕ್ಷಣಗಳು ಕಂಡು ಬಂದಿದೆ. ಇದರಿಂದ ಬೆಳೆಗಾರರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಮಲೆನಾಡಿನಲ್ಲಿ ಅಕ್ಟೋಬರ್‌ನಲ್ಲೂ ಸುರಿಯುತ್ತಿರುವ ಮಳೆಯ ಪರಿಣಾಮ ಕಾಫಿ ಫಸಲು ಶೇ 40ರಷ್ಟು ಉದುರುತ್ತಿದ್ದು, ಬೆಳೆಗಾರರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.
ರೋಬಸ್ಟಾ ಕಾಫಿ ಗಿಡಗಳಲ್ಲಿ ಕೊಳೆ ಹಾಗೂ ರೆಕ್ಕೆ ಬೋರರ್‌ ರೋಗದಿಂದ ಫಸಲು ನಾಶಗೊಂಡಿದ್ದರೆ, ಅಂತರ ಬೆಳೆಯಾಗಿ ಬೆಳೆಯುತ್ತಿರುವ ಕಾವೇರಿ, ಕಟುವಾಯಿ ಮೊದಲಾದ ಕಾಫಿ ಗಿಡಗಳು ಕೊಳೆ ರೋಗಕ್ಕೆ ಸಂಪೂರ್ಣ ತುತ್ತಾಗಿವೆ.

ಕಟಾವಿಗೆ ಬಂದಿರುವ ಅರೇಬಿಕಾ ಕಾಫಿ ಫಸಲು ಮಳೆಯಿಂದಾಗಿ ಉದುರುತ್ತಿದೆ. ಕಳೆದ ವರ್ಷ ಕಾಳುಮೆಣಸು ಬೆಲೆ ಕುಸಿತದಿಂದ ಕೆಂಗೆಟ್ಟಿದ್ದ ಬೆಳೆಗಾರರು ಪ್ರಸಕ್ತ ವರ್ಷ ಬಳ್ಳಿಗಳಲ್ಲಿ ಉತ್ತಮ ಫಸಲು ಮೂಡಿರುವುದನ್ನು ಕಂಡು ಸಮಾಧಾನಗೊಂಡಿದ್ದರು.

ADVERTISEMENT

ಇದೇ ಧಾರಣೆ ದೊರೆತರೆ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಗೊಳ್ಳುವ ಕನಸು ಕಂಡಿದ್ದರು. ಆದರೆ, ಈಗ ಸುರಿಯುತ್ತಿರುವ ಮಳೆಯಿಂದ ಎಲ್ಲ ಲೆಕ್ಕಾಚಾರಗಳು ತಲೆಕೆಳೆಗಾಗುವ ಲಕ್ಷಣಗಳು ಕಂಡು ಬರುತ್ತಿದೆ ಎನ್ನುತಾರೆ ಕಾಳುಮೆಣಸು ಕೃಷಿಕರು.

‘ಸಂಪೂರ್ಣ ನಾಶವಾಗಿದ್ದ ಕಾಳುಮೆಣಸನ್ನು ಮರುನಾಟಿ ಮಾಡಿ ಕಷ್ಟಪಟ್ಟು ಬೆಳೆದ ಬಳ್ಳಿಗಳಲ್ಲಿ ಉತ್ತಮ ಫಸಲು ಬಂದಿದ್ದರಿಂದ ಸಮಾಧನವಾಗಿತ್ತು. ಆದರೆ, ಈ ಮಳೆಯಿಂದಾಗಿ ಮತ್ತೆ ಹಳದಿರೋಗ ಮತ್ತು ಕೊಳೆರೋಗ ಕಂಡು ಬಂದಿದೆ. ಸಾಲು ಸಾಲು ಮೆಣಸಿನ ಬಳ್ಳಿಗಳು ನಾಶವಾಗುತ್ತಿವೆ. ಈ ಬೆಳೆಗೆ ಒಮ್ಮೆ ರೋಗ ಕಾಣಿಸಿಕೊಂಡರೆ ಹತೋಟಿಗೆ ತರುವುದು ತುಂಬಾ ಕಷ್ಟ’ ಎನ್ನುತ್ತಾರೆ ಪ್ರಗತಿಪರ ರೈತ ಎಚ್.ಆರ್.ರಾಮಚಂದ್ರ.

ಶುಂಟಿ ಬೆಳೆಗೂ ಕುತ್ತು: ಈ ಮಳೆಯು ಶುಂಠಿ ಬೆಳೆಗಾರರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಶುಂಠಿ ಬೆಳೆ ಮಳೆಯಿಂದಾಗಿ ಕೊಳೆ ರೋಗಕ್ಕೆ ತುತ್ತಾಗಿದೆ. ಹಲವು ಕೃಷಿಕರು ಸಿಕ್ಕಿದ ಬೆಲೆಗೆ ಶುಂಠಿ ಕಿತ್ತು ಮಾರಿದರೆ, ಮತ್ತೆ ಕೆಲವರ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯಿಂದಾಗಿ ಕೊಳೆ ರೋಗ ನಿರೋಧಕ ಔಷಧಿ ಸಿಂಪಡಿಸಲೂ ಸಾಧ್ಯವಾಗದೆ ಕೃಷಿಕರು ಚಿಂತೆಗೀಡಾಗಿದ್ದಾರೆ. ಭತ್ತಕ್ಕೆ ಎಲೆ ತಿನ್ನುವ ಕೀಟ

ಬಾಧೆ: ಭತ್ತದ ಬೆಳೆಗೆ ಎಲೆ ತಿನ್ನುವ ಕೀಟದ ಭಾದೆ ಕಾಣಿಸಿಕೊಂಡಿದೆ. ಮಳೆಯ ಕಾರಣ ಇದು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

 ಎಚ್‌.ಆರ್.ಜಗದೀಶ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.