ADVERTISEMENT

ಫ್ಲೆಕ್ಸ್‌ನಲ್ಲಿ ಅಂಬರೀಷ್‌: ನೀರು ಸರಬರಾಜಿಗೆ ಕತ್ತರಿ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 5:25 IST
Last Updated 21 ಸೆಪ್ಟೆಂಬರ್ 2013, 5:25 IST

ಹಾಸನ: ಗಣೇಶೋತ್ಸವಕ್ಕೆ ಸ್ವಾಗತ ಕೋರುವ ಫ್ಲೆಕ್ಸ್‌ನಲ್ಲಿ ಚಿತ್ರನಟ, ಸಚಿವ ಅಂಬರೀಷ್‌ ಚಿತ್ರ ಬಳಸಿದ ಕಾರಣಕ್ಕೆ ಊರಿಗೆ ನೀರು ಸರಬರಾಜು ಮಾಡುವ ಪೈಪ್‌ ಕತ್ತರಿಸಿ ಗ್ರಾಮಸ್ಥರಿಗೆ ತೊಂದರೆ ಉಂಟು ಮಾಡಿದ ಘಟನೆ ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟರಹಳ್ಳಿಯಲ್ಲಿ ನಡೆದಿದೆ.

ಬಂಟರಹಳ್ಳಿ ಹಾಗೂ ಮುತ್ತಿಗೆ ಹಿರೇಹಳ್ಳಿ ಅಕ್ಕಪಕ್ಕದ ಹಳ್ಳಿಗಳು. ಊರಿನಲ್ಲಿ ಕೆಲವು ಕೊಳವೆಬಾವಿ ಬತ್ತಿರುವುದರಿಂದ ಮುತ್ತಿಗೆ ಹಿರೇಹಳ್ಳಿಯ ಪಂಪ್‌ಹೌಸ್‌ನಿಂದ ಬಂಟರ ಹಳ್ಳಿಯ ಕೆಲವು ಭಾಗಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಮುತ್ತಿಗೆ ಹಿರೇಹಳ್ಳಿ ದೇವೇಗೌಡರ ಪತ್ನಿ ಚನ್ನಮ್ಮ ಅವರ ತವರೂರು. ರಾಜಕೀಯವಾಗಿ ಇಲ್ಲಿ ಜೆಡಿಎಸ್‌ ಬಲಿಷ್ಠವಾಗಿದೆ.

ಗ್ರಾಮದ ‘ಹ್ಯಾಪಿ ಬಾಯ್ಸ್’ ಹಾಗೂ ‘ಬಂಟರಹಳ್ಳಿ ಯುವಕ ಸಂಘದ’ ಹುಡುಗರು ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಗಣೇಶ ಮೂರ್ತಿ ಕೂರಿಸಿದ್ದು, ಮುಖ್ಯರಸ್ತೆಯಲ್ಲಿ ಒಂದುಕಡೆ ಹಾಗೂ ಹಳ್ಳಿಯ ಒಳಗೆ ಒಂದು ಕಡೆ ಗಣೇಶೋತ್ಸವಕ್ಕೆ ಸಂಬಂಧಿಸಿದ ಫ್ಲೆಕ್ಸ್‌ ಹಾಕಿದ್ದರು. ಗಣೇಶ ಪ್ರತಿಷ್ಠಾಪನಾ ಸಮಿತಿಯ ಸದಸ್ಯರಲ್ಲಿ ಒಂದಿಬ್ಬರು ಅಂಬರೀಷ್‌ ಅಭಿಮಾನಿ­ಗಳೂ ಆಗಿದ್ದರಿಂದ ಫ್ಲೆಕ್ಸ್‌ನಲ್ಲಿ ಗ್ರಾಮದ ಮುಖಂಡರ ಜತೆಗೆ ಸಣ್ಣದಾಗಿ ಅಂಬರೀಷ್‌ ಚಿತ್ರವನ್ನೂ ಬಳಸಿದ್ದರು. ಇದು ವಿವಾದಕ್ಕೆ ಕಾರಣ.

‘ಜೆಡಿಎಸ್‌ ಮುಖಂಡರ ಚಿತ್ರದ ಜತೆಯಲ್ಲಿ ಕಾಂಗ್ರೆಸ್‌ ಶಾಸಕರ ಚಿತ್ರ ಹಾಕಿದ್ದೇಕೆ ?’ ಎಂದು ಆಕ್ಷೇಪ ತೆಗೆದ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಕೆಲವು ಜೆಡಿಎಸ್‌ ಪುಢಾರಿಗಳು ಗಣೇಶೋ­ತ್ಸವದ ಸಮಿತಿಯವರ ಜತೆ ವಾಗ್ವಾದ ನಡೆಸಿದರು. ಸಾಲದೆಂಬಂತೆ ಮುಖ್ಯರಸ್ತೆಯ ಪಕ್ಕದಲ್ಲಿ ಹಾಕಿದ್ದ ಫ್ಲೆಕ್ಸ್‌ನಿಂದ ಅಂಬರೀಷ್‌ ಚಿತ್ರ ಮಾತ್ರ ಹರಿದು ತೆಗೆದಿದ್ದಾರೆ. ಇಲ್ಲಿಗೇ ತೃಪ್ತರಾಗದೆ ಮುತ್ತಿಗೆ ಹಿರೇಹಳ್ಳಿಯಿಂದ ಬಂಟರಹಳ್ಳಿಗೆ ನೀರು ಸರಬರಾಜು ಮಾಡುವ ಪೈಪ್‌, ವಾಲ್ವ್‌ ಮುಂತಾದವುಗಳನ್ನು ಒಂದೇ ವಾರದಲ್ಲಿ ಎರಡು ಬಾರಿ ಕತ್ತರಿಸಿ ಹಾಕಿದ್ದಾರೆ.

ಈ ಬಗ್ಗೆ ದೂರು ನೀಡಲು ಅಥವಾ ಮಾಧ್ಯಮದವರಿಗೆ ಮಾಹಿತಿ ನೀಡಲು ಸಹ ಗ್ರಾಮಸ್ಥರು ಹಿಂಜರಿ­ಯುತ್ತಾರೆ. ‘ಸಣ್ಣ ಕಾರಣಕ್ಕೆ ಯಾರೋ ಪೈಪ್‌ ಕತ್ತರಿಸಿ ಹಾಕಿದ್ದು ನಿಜ. ನಾಲ್ಕೈದು ದಿನ ನೀರಿಲ್ಲದೆ ನಾವು ಸಂಕಟ ಅನುಭವಿಸಿದ್ದೇವೆ. ಈಗ ಎಲ್ಲ ಸರಿಯಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ­ಯೊಬ್ಬರು ತಿಳಿಸಿದ್ದಾರೆ.

‘ಯಾರೋ ಕಿಡಿಗೇಡಿಗಳು ಒಂದು ವಾರದಲ್ಲಿ ಎರಡು ಬಾರಿ ಪೈಪ್‌, ವಾಲ್ವ್‌ ಕತ್ತರಿಸಿ ಹಾಕಿದ್ದರು.
ವಾಲ್ವ್‌ಮೆನ್‌ ಆಗಲಿ, ಗ್ರಾಮಸ್ಥ­ರಾಗಲಿ ದೂರು ಕೊಡಲು ಹಿಂಜರಿ­ಯುತ್ತಾರೆ. ಈಗ ಸಮಸ್ಯೆ ಸರಿ­ಪಡಿಸಿದ್ದೇವೆ.

ಪೈಪ್‌ ಒಡೆದಿದ್ದ ಜಾಗದಲ್ಲಿ ಮಣ್ಣು ಹಾಕಿ ಅಲ್ಲಿ ಮುಳ್ಳು ನೆಟ್ಟಿದ್ದೇವೆ’ ಎಂದು ಮೊಸಳೆಹೊಸಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಆರ್‌. ಪಾಪಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.