ADVERTISEMENT

ಬಡ ಕುಟುಂಬಗಳಿಗೆ ಸೂರು: ಶಾಸಕ

‘ಹೌಸಿಂಗ್‌ ಫಾರ್‌ ಆಲ್‌’ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:58 IST
Last Updated 24 ಮಾರ್ಚ್ 2018, 10:58 IST

ಅರಸೀಕೆರೆ: ತಲೆ ಮೇಲೆ ಸೂರು ನಿರ್ಮಿಸಿಕೊಳ್ಳಬೇಕು ಎಂದು ದಶಕದಿಂದ ಹಂಬಲಿಸುತ್ತಿದ್ದ ನಗರದ ಬಡ, ದುರ್ಬಲ ಹಾಗೂ ನಿವೇಶನ ರಹಿತ ಸಾವಿರಾರು ಮಂದಿಯ ಮುಖದಲ್ಲಿ ಶುಕ್ರವಾರ ಸಂತಸ ಮೂಡಿತ್ತು.

ಕಾರಣ; ‘ಹೌಸಿಂಗ್‌ ಫಾರ್‌ ಆಲ್’ ಯೋಜನೆಯಡಿ ಜಿ +1 ಮಾದರಿಯಲ್ಲಿ ನಗರಸಭೆಯು ನಗರದ ಹೊರವಲಯದ ಸುಬ್ರಮಣ್ಯ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮನೆ ನಿರ್ಮಿಸಿ ಕೊಡಲು ಮುಂದಾಗಿದೆ. ನಗರದ ಪರಿಮಿತಿಯಲ್ಲಿ ಬರುವ ಹಾಗೂ ನಿವೇಶನ ರಹಿತರಿಗೆ ಉಚಿತವಾಗಿ ನಿವೇಶನ ನೀಡುವ ಕಾರ್ಯಕ್ರಮದಲ್ಲಿ ಅವರೆಲ್ಲರೂ ಭಾಗವಹಿಸಿದ್ದರು.

ಪುರಸಭೆ ಆಡಳಿತವು ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾರ್ಗದರ್ಶನದಲ್ಲಿ ನಗರದ ಹೊರವಲಯದಲ್ಲಿ ಭೂಮಿ ಖರೀದಿಸಿ ಒಂದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿತ್ತು. ಆದರೆ, ಈ ನಿವೇಶನಗಳನ್ನು ವಿತರಿಸಲು ಅಡೆತಡೆಗಳು ಬಂದಿದ್ದವು.

ADVERTISEMENT

ಈ ನಡುವೆ ಶಾಸಕರು 2012ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಜತೆ ಆಯಾ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮ್ಮುಖದಲ್ಲಿ ಪಾರದರ್ಶಕವಾಗಿಯೇ ಫಲಾನುಭವಿಗಳಿಂದ ಅರ್ಜಿ ಪಡೆದು ಆಯ್ಕೆ ಮಾಡಲಾಗಿತ್ತು.

ಇತ್ತೀಚೆಗೆ ಬದಲಾದ ವಿದ್ಯಮಾನ ಬೆಳವಣಿಗೆಯಲ್ಲಿ ನಿವೇಶನ ಕೋರಿ ಸಲ್ಲಿಸಲಾಗಿದ್ದ ಅರ್ಹ ಫಲಾನುಭವಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದ ಹೌಸಿಂಗ್‌ ಫಾರ್‌ ಆಲ್‌ ಯೋಜನೆಯಡಿ ನಿರ್ಮಿಸಿ ಕೊಡಲಾಗುವ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಫಲಾನುಭವಿಗಳು, ನಗರಸಭಾ ಅಧ್ಯಕ್ಷ ಹಾಗೂ ಸದಸ್ಯರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನೆಗುದಿಗೆ ಬಿದ್ದಿದ್ದ ನಿವೇಶನ ರಹಿತ 1,309 ಮಂದಿ ಫಲಾನುಭವಿಗಳ ಕನಸು ಇಂದು ಸಾಕಾರಗೊಳ್ಳುತ್ತಿದೆ. ಇದು ಬಡವರಿಗೆ ಸಿಕ್ಕಿದ ಜಯ. ಇನ್ನು ಯಾರೂ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ₹ 56 ಕೋಟಿ ವೆಚ್ಚದಲ್ಲಿ ಜಿ+1ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಉಪಾಧ್ಯಕ್ಷ ಪಾರ್ಥಸಾರಥಿ, ಸದಸ್ಯರಾದ ಬಿ.ಎನ್‌.ವಿದ್ಯಾಧರ್‌, ಮನು, ಪಂಚಾಕ್ಷರಿ, ಅನ್ನಪೂರ್ಣಾ ಸತೀಶ್‌, ಭಾಗ್ಯಾ ಮಂಜುನಾಥ್‌, ನಾಸೀಂ ಶಫೀ, ಫೈರೋಜ್‌, ಸುರೇಶ್‌, ಯೂನಸ್‌, ಬಬ್ರುವಾಹನ, ಶೈಲೇಂದ್ರ, ಬಾಲ ಮುರುಗನ್‌, ಶ್ರೀನಿವಾಸ್‌, ಒ.ಜಿ.ಗೀತಾ, ಜಯಪದ್ಮಾ, ಹಾಜೀವಾಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.