ADVERTISEMENT

ಬದ್ಧತೆಯಿಂದ ಕೆಲಸ ಮಾಡಿದರೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 4:30 IST
Last Updated 17 ಜನವರಿ 2012, 4:30 IST

ಚನ್ನರಾಯಪಟ್ಟಣ:  ಮುಖಂಡರು ಒಗ್ಗಟ್ಟು ಪ್ರದರ್ಶಿಸಿ ಬದ್ಧತೆಯಿಂದ ಕೆಲಸ ಮಾಡಿದಾಗ ಪಕ್ಷ ಅಂಥವರನ್ನು ಗುರುತಿಸಿ ವಿಧಾನ ಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲಿದೆ. ಬದ್ಧತೆಯಿಂದ ಕೆಲಸ ಮಾಡದಿದ್ದರೆ ಟಿಕೆಟ್ ಬೇರೆ ಪಕ್ಷದ ಅಭ್ಯರ್ಥಿ ಪಾಲಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಸೋಮವಾರ ಹೇಳಿದರು.

~ಚನ್ನರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ~ಯಲ್ಲಿ ಮಾತನಾಡಿದ ಅವರು, ಮುಖಂಡರು ಜನರ ಸಮಸ್ಯೆ ನಿವಾರಿಸುವ ರೀತಿಯಲ್ಲಿ ಹೋರಾಟ ಮಾಡಬೇಕು. ಕಾರ್ಯಕರ್ತರಿಗೆ ಸ್ಪಂದಿಸಬೇಕು. ಉತ್ತಮವಾಗಿ ಕೆಲಸ ಮಾಡುವ ನಾಯಕರನ್ನು ಕಾರ್ಯಕರ್ತರು ಗುರುತಿಸುತ್ತಾರೆ. ಕಾರ್ಯಕರ್ತರು ನೀಡುವ ಮಾಹಿತಿ ಆಧರಿಸಿ ವರಿಷ್ಟರು ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ. ಉತ್ತರ ಪ್ರದೇಶದಲ್ಲಿ ಆರು ತಿಂಗಳ ಮೊದಲೇ 2 ಕಂತಿನಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಅದೇ ವಿಧಾನವನ್ನು ಕರ್ನಾಟಕದಲ್ಲಿ ಅನುಸರಿವುದರಿಂದ ಚುನಾವಣೆಗೆ ಸಾಕಷ್ಟು ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ಬೇರೊಂದು ಪಕ್ಷದವರ ಪಾಲಾಗದಂತೆ ನೋಡಿಕೊಳ್ಳಬೇಕಾದರೆ ಪಕ್ಷದ ಸಂಘಟನೆಗೆ ಮುಖಂಡರು ನಿಷ್ಟೆಯಿಂದ ದುಡಿಯಬೇಕು. ಇದರಿಂದ ಮುಂದಿನ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಅಭ್ಯರ್ಥಿ ಜಯಗಳಿಸುತ್ತಾರೆ. ಯಾರೋ ಬಂದು ಪಕ್ಷದಲ್ಲಿ ಸ್ಥಾನಮಾನ ಪಡೆದರೆ ಕಾರ್ಯಕರ್ತರ ಸ್ಥಿತಿ ಏನಾಗುತ್ತದೆ ಎಂಬುದನ್ನು ಯೋಚಿಸಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಹೇಮಾವತಿ ಸಹಕಾರ ಸಕ್ಕರೆ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಕಾರ್ಖಾನೆಯ ನೌಕರರೊಬ್ಬರು ಆಕ್ರಮ ಎಸಗಲು ಮುಂದಾದರು. ಆಗ ಅನ್ಯಾಯ ಪ್ರತಿಭಟಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಪ್ರಕರಣ ಕೈಬಿಡದಿದ್ದರೆ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮತ್ತೊಬ್ಬ ಮುಖಂಡ ಎಚ್.ಎಸ್. ವಿಜಯಕುಮಾರ್ ಮಾತನಾಡಿ, ಪಿಎಲ್‌ಡಿ ಬ್ಯಾಂಕಿನಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರಿದ್ದರೂ,  ಕೇವಲ 3 ನಿರ್ದೇಶಕರನ್ನು ಹೊಂದಿರುವ ಜೆಡಿಎಸ್ ಬೆಂಬಲಿತರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದು ತರವಲ್ಲ ಎಂದರು.

ಮುಖಂಡರಾದ ಸಿ.ವಿ. ರಾಜಪ್ಪ, ಕಬ್ಬಳಿ ರಂಗೇಗೌಡ, ಡಾ.ಎನ್.ಬಿ. ನಂಜಪ್ಪ, ಎಂ. ಶಂಕರ್, ಸಿ.ಎನ್. ಚಂದ್ರೇಗೌಡ, ಆರ್. ರಂಗೇಗೌಡ, ಸಿ.ಎಸ್. ಜಯರಾಂ,  ವಿ.ಜಿ. ಲಲಿತಮ್ಮ, ಎ.ಬಿ. ನಂಜುಂಡೇಗೌಡ, ಎಂ.ಎ. ರಂಗಸ್ವಾಮಿ, ಸಿ.ಟಿ. ಅಶೋಕ್ ಕುಮಾರ್. ರವಿ, ಅಣ್ಣಪ್ಪ, ಎನ್.ಟಿ. ಬೊಮ್ಮೇಗೌಡ, ರವೀಶ್, ಪಿ.ಕೆ. ಮಂಜೇಗೌಡ, ಮೋಹನ್‌ಕುಮಾರ್. ಕೆ.ಎಲ್. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.