ADVERTISEMENT

ಬಯಲು ಸೀಮೆಗೆ ಹರಿಯಲಿದೆ ಯಗಚಿ ನೀರು

ಹಳೇಬೀಡು- ಮಾದಿಹಳ್ಳಿ ಹೋಬಳಿ ಜನರ ಎರಡು ದಶಕದ ಬೇಡಿಕೆಗೆ ಮನ್ನಣೆ

ಪ್ರಜಾವಾಣಿ ವಿಶೇಷ
Published 13 ಡಿಸೆಂಬರ್ 2012, 10:36 IST
Last Updated 13 ಡಿಸೆಂಬರ್ 2012, 10:36 IST

ಬೇಲೂರು: ಯಗಚಿ ಜಲಾಶಯದಿಂದ ತಾಲ್ಲೂಕಿನ ಹಳೇಬೀಡು- ಮಾದಿಹಳ್ಳಿ ಹೋಬಳಿಗಳಿಗೆ ನೀರು ಹರಿಸಬೇಕು ಎಂಬ ಎರಡೂವರೆ ದಶಕಗಳ ಬೇಡಿಕೆ ಈಡೇರುವ ದಿನಗಳು ಸಮೀಸುತ್ತಿವೆ. ಈ ಹೋಬಳಿಗಳಿಗೆ ನೀರು ಒದಗಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ.

ಚಿಕ್ಕಬ್ಯಾಡಿಗೆರೆ ಸಮೀಪ ಯಗಚಿ ಜಲಾಶಯ ನಿರ್ಮಾಣಕ್ಕೆ 1984ರಲ್ಲಿ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಶಿಲಾನ್ಯಾಸ ನೆರವೇ ರಿಸಿದ್ದರು. ತಾಲ್ಲೂಕಿನ ಬಯಲುಸೀಮೆ ಪ್ರದೇಶ ಗಳಾದ ಹಳೇಬೀಡು- ಮಾದಿಹಳ್ಳಿ ಹೋಬಳಿ ಗಳಿಗೆ ಇಲ್ಲಿಂದ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬ ಹೋರಾಟ ಅಂದಿನಿಂದಲೇ ಆರಂಭವಾ ಗಿತ್ತು. ನಿರಂತರವಾಗಿ ಜನರು ಹೋರಾಟ, ಪ್ರತಿಭಟನೆ ನಡೆಸಿಕೊಂಡು ಬಂದಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಳೇಬೀಡು- ಮಾದಿಹಳ್ಳಿ ಹೋಬಳಿ ಕೃಷ್ಣಾ ಕಣಿವೆಯ ವ್ಯಾಪ್ತಿಯಲ್ಲಿ ಬರಲಿದೆ ಎಂಬ ನೆಪವೊಡ್ಡಿ ಯೋಜನೆ ಜಾರಿಗೆ ಕ್ರಮ ಕೈಗೊಂಡಿರಲಿಲ್ಲ. ಎರಡು ಸರ್ಕಾರಗಳ ಅವಧಿಯಲ್ಲಿ ಉಸ್ತುವಾಗಿ ಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರೂ ಯೋಜನೆ ಜಾರಿಗೆ ಭರವಸೆ ನಿಡುತ್ತಿದ್ದರೇ ಹೊರತು ಕಾರ್ಯರೂಪಕ್ಕೆ ತರಲಿಲ್ಲ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಚ್.ಸಿ. ಶ್ರೀಕಂಠಯ್ಯ  ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಆಡಳಿತಾತ್ಮಕ, ತಾಂತ್ರಿಕ ಮಂಜೂರಾತಿ ನೀಡಿ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಜನರಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಆದರೆ, ಸರ್ಕಾರ ವಿಸರ್ಜನೆಗೊಂಡು ಯೋಜನೆ ನೆನೆಗುದಿಗೆ ಬಿದ್ದಿತು. ವಿರೋಧ ಪಕ್ಷದ ನಾಯಕ ರಾಗಿದ್ದ ಬಿ.ಎಸ್. ಯಡಿಯೂರಪ್ಪ ಎರಡು ಹೋಬಳಿಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹಳೇಬೀಡು-ಮಾದಿಹಳ್ಳಿ ಹೋಬಳಿಯ ಕೆಲ ಭಾಗಗಳಲ್ಲಿ ಪಾದಯಾತ್ರೆ ನಡೆಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ನೀರು ನೀಡುವ ಭರವಸೆ ನೀಡಿದ್ದರು. ಅವರ ಅವಧಿಯಲ್ಲೂ ಯೋಜನೆ ಕಾರ್ಯರೂಪಕ್ಕೆ ಬಂರಲಿಲ್ಲ.

ಈಗಿನ ಶಾಸಕರ ಅವಧಿಯಲ್ಲಿ ಕಾಮಗಾರಿ ಆರಂಭವಾಗಿದೆ. ಯೋಜನೆಗೆ 2011ರ ಜುಲೈ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಅಕ್ಟೋಬರ್ ತಿಂಗಳಲ್ಲಿ ಮಂಜೂ ರಾತಿ ನೀಡಲಾಗಿದೆ. 9 ಕೋಟಿ ರೂಪಾಯಿ ಯೋಜನೆಗೆ ಗುತ್ತಿಗೆದಾರರು ಟೆಂಡರ್ ಮೊತ್ತಕ್ಕಿಂತ ಶೇಕಡ 15ರಷ್ಟು ಹೆಚ್ಚು ದರ ನಿಗದಿಪಡಿಸಿದ್ದರಿಂದ ಯೋಜನೆಯ ವೆಚ್ಚ 11.65 ಕೋಟಿಗೆ ಏರಿದೆ. ಈ ವರ್ಷ 3 ಕೋಟಿ ಅನುದಾನ ನೀಡಲಾಗಿದೆ. ಹಳೇಬೀಡಿನ ದೋರಸಮುದ್ರ ಕೆರೆ ಸೇರಿದಂತೆ 17 ಕೆರೆ ಮತ್ತು ಅಡಗೂರು ಹೋಬಳಿಯ 22 ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಯೋಜನೆ ಜಾರಿಗೊಂಡರೆ ಎರಡೂ ಹೋಬಳಿಗಳ 26 ಹಳ್ಳಿಗಳ ಜನರಿಗೆ ಪ್ರಯೋಜನವಾಗಲಿದೆ.

ಯಗಚಿ ಅಣೆಕಟ್ಟೆಯ ಎಡದಂಡೆ ನಾಲೆ 23.33 ಕಿ.ಮೀ. ಸಮೀಪ ಜಾಕ್‌ವೆಲ್ ಅಳವಡಿ ಸಲಾಗುತ್ತಿದೆ. 340 ಎಚ್.ಪಿ. ಮೋಟರ್ ಮೂಲಕ ನೀರನ್ನು 800 ಮೀಟರ್ ಮೇಲೆತ್ತ ಲಾಗುತ್ತದೆ. ಬಳಿಕ 3.85 ಕಿ.ಮೀ. ಉದ್ದದ ಎಡದಂಡೆ ನಾಲೆ ಹಳೇಬೀಡು ಹೋಬಳಿಯ 17 ಕೆರೆಗಳಿಗೆ ಮತ್ತು 4.595 ಕಿ.ಮೀ. ಬಲದಂಡೆ ನಾಲೆಯ ಮೂಲಕ ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. 400 ಮೀಟರ್ ಮೇಲ್ಗಾಲುವೆ ನಿರ್ಮಿಸಲಾ ಗುತ್ತಿದ್ದು, ಹತ್ತು ಕಿ.ಮೀ. ವಿತರಣಾ ಕಾಲುವೆ ನಿರ್ಮಿಸ ಬೇಕಿದೆ. ಯೋಜನೆಗೆ ಯಗಚಿ ಜಲಾಶಯದಿಂದ 0.22 ಟಿ.ಎಂ.ಸಿ. ನೀರು ಬಳಸಿ ಕೊಳ್ಳಲಾಗು ವುದು. ವರ್ಷದಲ್ಲಿ 70 ದಿನಗಳ ಕಾಲ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಯಗಚಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ವೈ.ಎನ್. ಮಲ್ಲೇಶ್‌ಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ಶಾಶ್ವತ ನೀರಾವರಿ ಅಗತ್ಯ
ಹಳೇಬೀಡು- ಮಾದಿಹಳ್ಳಿ ಹೋಬಳಿಗೆ ಕುಡಿಯುವ ನೀರು ಒದಗಿಸಿದರೆ ಸಾಲದು, ರೈತರ ಜಮೀನುಗಳಿಗೆ ಮಹಾರಾಜರ ಕಾಲದ ರಣಘಟ್ಟ ಒಡ್ಡಿನ ಮೂಲಕ ನೀರು ಹರಿಸಬೇಕು ಎಂಬುದು ಯಗಚಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಗ್ರಹ. ಕೃಷ್ಣಾ- ಕಾವೇರಿ ಕಣಿವೆ ಎಂಬ ವಿವಾದದ ಕಾರಣ ಇದು ಸಾಧ್ಯವಿಲ್ಲ ಎಂಬುದು ಯಗಚಿ ಅಧಿಕಾರಿಗಳ ಅನಿಸಿಕೆ. ಈ ಗೊಂದಲದ ನಡುವೆ ಕುಡಿಯುವ ನೀರಿನ ದಾಹ ನೀಗಿಸುತ್ತಿರುವುದು ಜನರಿಗೆ ಸಮಾಧಾನ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.