ADVERTISEMENT

ಬಾಡುತ್ತಿರುವ ಬೆಳೆ: ಸಂಕಷ್ಟದಲ್ಲಿ ರೈತರು

ಅರಸೀಕೆರೆ: ಶೇ 80ರಷ್ಟು ಮಳೆ ಕೊರತೆ

ಮಾಡಾಳು ಶಿವಲಿಂಗಪ್ಪ
Published 18 ಆಗಸ್ಟ್ 2016, 10:38 IST
Last Updated 18 ಆಗಸ್ಟ್ 2016, 10:38 IST
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ರೈತರೊಬ್ಬರ ಹೊಲದಲ್ಲಿ ರಾಗಿ ಬೆಳೆ ಬಿರುಬಿಸಿಲಿಗೆ ಬಾಡುತ್ತಿದೆ
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ರೈತರೊಬ್ಬರ ಹೊಲದಲ್ಲಿ ರಾಗಿ ಬೆಳೆ ಬಿರುಬಿಸಿಲಿಗೆ ಬಾಡುತ್ತಿದೆ   

ಅರಸೀಕೆರೆ: ತಾಲ್ಲೂಕಿನಲ್ಲಿ ಕಳೆದ 20 ದಿನಗಳಿಂದ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿವೆ. ರೈತರ ಮೊಗದಲ್ಲಿ ಆತಂಕದ ಛಾಯೆ ಆವರಿಸಿದೆ. ಕಳೆದ 5 ವರ್ಷಗಳಿಂದ ವರುಣನ ಅವಕೃಪೆಗೆ ಒಳಗಾಗಿ ಸತತ ಬರದಿಂದ ತತ್ತರಿಸಿರುವ ತಾಲ್ಲೂಕಿನ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ಒಂದು ತಿಂಗಳಿನಿಂದ ಮಳೆ ಪ್ರಮಾಣ ಕುಸಿಯುತ್ತ ಬಂದಿದೆ. ಪ್ರಸ್ತುತ ಆಗಸ್ಟ್‌ ತಿಂಗಳಲ್ಲಿ ಒಟ್ಟಾರೆ ತಾಲ್ಲೂಕಿನಲ್ಲಿ ಶೇ 80ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ರಾಗಿ ಬಿತ್ತನೆಗೆ ಬೇಕಾದ ಮಳೆ ಮಾಯವಾಗಿ ಬಿರುಬಿಸಿಲು ಹೆಚ್ಚುತ್ತಿದೆ. ತೇವಾಂಶ ಕೊರತೆಯಿಂದ ರೈತರ ಪ್ರಮುಖ ಆಹಾರ ಬೆಳೆ ಹಾಗೂ ಜಾನುವಾರುಗಳ ಮೇವಿನ ಬೆಳೆ ರಾಗಿ, ಸಾವೆ, ನವಣೆ, ಕೆಂಪು ಜೋಳದ ಬೆಳೆಗಳು ಬಾಡುತ್ತಿವೆ.

ಈ ವರ್ಷ ಮುಂಗಾರಿನಲ್ಲಿ ಸಮೃದ್ಧ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನಾ ವರದಿಯಿಂದ ರೈತ ಸಮುದಾಯದಲ್ಲಿ ಆಶಾ ಭಾವನೆ ಮೂಡಿತ್ತು. ಬರಗಾಲದಿಂದ ಈ ವರ್ಷ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.  65,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು.

ತಾಲ್ಲೂಕಿನಲ್ಲಿ ಜೂನ್‌ ತಿಂಗಳ ಅಂತ್ಯದಲ್ಲಿ ಹದ ಮಳೆಯಾದ ಪರಿಣಾಮವಾಗಿ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದರು.

ಪಂಪ್‌ಸೆಟ್‌ ಹೊಂದಿರುವವರು ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. 

ಆದರೆ, ಕಳೆದ 20 ದಿನಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಜೂನ್‌ ತಿಂಗಳಿನಿಂದ ಆಗಸ್ಟ್‌ವರೆಗೆ ವಾಡಿಕೆಗಿಂತ ಕಡಿಮೆ ಮಳೆ ಯಾಗಿದೆಯಾದರೂ ಸಮನಾಂತರವಾಗಿ ಬಿದ್ದಿಲ್ಲ. ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆ 18.9 ಮಿ.ಮೀ, ಆ.1ರಿಂದ 8ರವರೆಗೆ ಬಿದ್ದಿರುವ ಮಳೆ 1.7 ಮಿ.ಮೀ.ನಷ್ಟು ಮಾತ್ರ.

ಈಗ ಮಳೆ ಬಾರದೆ ಇದ್ದರೆ ಬೆಳೆ ಹಾನಿಯಾಗುವ ಆಪಾಯ ಎದುರಾಗಿದೆ. ರೈತರು ಪ್ರತಿನಿತ್ಯ ಆಕಾಶದತ್ತ ಮುಖಮಾಡಿ ಮಳೆಯ ಬರುವಿಗಾಗಿ ಕಾಯುತ್ತಿದ್ದಾರೆ.

***
ಇನ್ನೊಂದು ವಾರದೊಳಗೆ ಮಳೆ ಬಾರದೇ ಹೋದರೆ ಜಾನುವಾರು ಮೇವಿನ ಬೆಳೆಯಾದ ರಾಗಿ, ಹಿಂಗಾರು ಸಾವೆ ಹುಲ್ಲು ರೈತರ ಕೈ ಸೇರುವುದಿಲ್ಲ.
-ನಂಜುಂಡಪ್ಪ, ರೈತ, ಹಾರನಹಳ್ಳಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.