ADVERTISEMENT

ಬಾಯಲ್ಲಿ ನೀರೂರಿಸುವ ಮಾವು..

ಕಡಿಮೆ ದರದಲ್ಲಿ ಕಾರ್ಬೈಡ್‌ ಮುಕ್ತ ಹಣ್ಣುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:28 IST
Last Updated 6 ಜೂನ್ 2018, 12:28 IST
ಹಾಸನದ ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಚಾಲನೆ ನೀಡಿದರು.
ಹಾಸನದ ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಚಾಲನೆ ನೀಡಿದರು.   

ಹಾಸನ : ನಗರದ ಕೆ.ಎಸ್.ಆರ್.ಟಿ.ಸಿ ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಆಕರ್ಷಕ ರೂಪ, ಸ್ವಾದಿಷ್ಟ ರುಚಿಯ ಮಾವು ಇಲ್ಲಿ ತರಾವರಿ ಸ್ವರೂಪಗಳಲ್ಲಿತ್ತು. ವಿವಿಧ ತಳಿಗಳಾದ ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೇಂದೂರ, ಮಲಗೋಬಾ, ತೋತಾಪುರಿ, ನೀಲಂ, ಅಮ್ರಪಾಲಿ, ಕೇರ್ಸ, ದಶೇರಿ ತಳಿಗಳ ಹಣ್ಣುಗಳನ್ನು ನೋಡಲು ಎರಡು ಕಣ್ಣುಗಳ ಸಾಲದು.

ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಮಂಗಳವಾರ ಮೇಳಕ್ಕೆ ಚಾಲನೆ ನೀಡುವ ಮುನ್ನವೇ ಗ್ರಾಹಕರು ಹಣ್ಣುಗಳನ್ನು ಖರೀದಿಸುತ್ತಿದ್ದರು. ವಿವಿಧ ತಳಿಯ ಮಾವಿನ ಬೆಲೆ  ಚಿಲ್ಲರೆ ಮಾರಾಟಕ್ಕೆ ಹೋಲಿಸಿದರೆ ಕಡಿಮೆ ಇದ್ದ ಕಾರಣ ಗ್ರಾಹಕರು ಮುಗಿಬಿದ್ದು ಕೊಂಡರು.  ಕಾರ್ಬೈಡ್‌ ಮುಕ್ತ ಹಣ್ಣುಗಳಿವು ಎಂದು ಪ್ರಚಾರ ಮಾಡಿದ್ದು ಇದಕ್ಕೆ ಮುಖ್ಯ ಕಾರಣ.

ADVERTISEMENT

11ರ ವರೆಗೆ ಮಾವು, ಹಲಸು ಮೇಳ ನಡೆಯಲಿದ್ದು, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದಾರೆ. 20 ಬಗೆಯ ಮಾವು, ಮೂರು ಬಗೆಯ ಹಲಸಿನ ಹಣ್ಣುಗಳು ಗ್ರಾಹಕರನ್ನು ಮೋಡಿ ಮಾಡಿದವು.  10ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಾವು ಮಾರಾಟ ಮಾಡಲಾಗುತ್ತಿದೆ.

ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಿ.ಪಿ. ಜಾಫರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ಆರೋಗ್ಯ ಅಧಿಕಾರಿ ಕೆ.ವೆಂಕಟೇಶ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ಅವರೊಂದಿಗೆ ಮಳಿಗೆಗಳಿಗೆ ಭೇಟಿ ನೀಡಿ ಹಣ್ಣುಗಳ ವಿಶೇಷತೆ ಕುರಿತು ಮಾಹಿತಿ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಾಫರ್, ‘ಮಾವು ಬೆಳೆ ಉತ್ಪಾದನೆ ಹಾಗೂ ಮಾರಟ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾವು ಮೇಳ ಆಯೋಜಿಸಲಾಗಿದೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಮಾರುಕಟ್ಟೆ ವಿಸ್ತರಣೆಗೊಳ್ಳುವುದರ ಜತೆಗೆ ವಿವಿಧ ಜಿಲ್ಲೆಗಳ ಹಣ್ಣುಗಳ ಪರಿಚಯವಾಗಲಿದೆ, ಹಾಸನ ಜಿಲ್ಲೆಯಲ್ಲಿ 2861 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು ಅಂದಾಜು 21,547 ಟನ್ ಗಳಷ್ಟು ಉತ್ಪಾದನೆ ಇದೆ’ ಎಂದು ಹೇಳಿದರು.

ಮೇಳದಲ್ಲಿ 20ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು ವಿವಿಧ ತಳಿಯ ಕಾರ್ಬೈಡ್‌ ಮುಕ್ತ ಮಾವಿನ ಹಣ್ಣುಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಮೇಳದಲ್ಲಿ ಸುಧಾರಿತ ಮಾವು ತಳಿಗಳಾದ ಆಲ್ಫಾನ್ಸೊ, ರಸಪುರಿ, ಬಾದಾಮಿ, ನೀಲಂ, ಮಲಗೋವ, ಸಿಂಧೂರ, ತೊತಾಪುರಿ, ಮಲ್ಲಿಕಾ, ಕಲಮಿ, ಅಮ್ರಪಾಲಿ, ಬಂಗನ್ ಪಲ್ಲಿ, ರಾಮರಸ, ಮಾಣಿಬಟ್ , ನಾಜೂರ್ ಬಾದಾಮ್, ರುಮಾನಿ, ವಾರಾಜ, ದಶೇರಿ, ಸ್ವರ್ಣರೇಖಾ, ಜನಾರ್ಧನ್ ಪಸಂದ್, ಬನೇಶನ್, ಜಹಂಗೀರ್ ಮಾವಿನ ಹಣ್ಣುಗಳು ಪ್ರದರ್ಶನಕ್ಕೆ ಇಡಲಾಗಿತ್ತು.

ಮಾವು ಮೇಳ ಆಯೋಜಿಸಿದ್ದ ಮಳಿಗೆಯೊಂದರಲ್ಲಿ ಸಸ್ಯ ಸಂತೆ ಆಯೋಜಿಸಲಾಗಿತ್ತು. ಇಲ್ಲಿ ಮಾವು, ನಿಂಬೆ, ಅಡಿಕೆ, ತೆಂಗು, ತುಳಸಿ ಹಾಗೂ ವಿವಿಧ ಬಗೆಯ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.