ADVERTISEMENT

‘ಬಿಜೆಪಿಯ ವಿಸ್ತಾರಕ್‌ ಯೋಜನೆ ಕಳವು ಮಾಡಿದ ಕಾಂಗ್ರೆಸ್‌’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 6:52 IST
Last Updated 16 ಅಕ್ಟೋಬರ್ 2017, 6:52 IST

ಬೇಲೂರು: ‘ಬಿಜೆಪಿಯ ವಿಸ್ತಾರಕ್‌ ಯೋಜನೆಯನ್ನು ಕಾಂಗ್ರೆಸ್‌ ಪಕ್ಷ ಕಳವು ಮಾಡಿ ಮನೆ ಮನೆಗೆ ಕಾಂಗ್ರೆಸ್‌ ಹೆಸರಿನಲ್ಲಿ ಪ್ರಚಾರಕ್ಕೆ ಬಳಸಿಕೊಂಡಿದೆ’ ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌ ಆರೋಪಿಸಿದರು. ಬಿಜೆಪಿ ತಾಲ್ಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಬೂತ್‌ ಸಶಕ್ತೀಕರಣ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿಯು ವಿಸ್ತಾರಕ್‌ ಯೋಜನೆ ಆರಂಭಿಸಿತ್ತು. ಕಾಂಗ್ರೆಸ್‌ ಈಗ ಅದನ್ನು ಮನೆ ಮನೆಗೆ ಕಾಂಗ್ರೆಸ್‌ ಹೆಸರಿನಲ್ಲಿ ನಕಲು ಮಾಡಿದೆ ಎಂದರು.

‘ದೇಶದೆಲ್ಲೆಡೆ ಕಾಂಗ್ರೆಸ್‌ ಅಂತ್ಯವನ್ನು ಕಾಣುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸಂಪೂರ್ಣ ನಾಶವಾಗಲಿದೆ. ಕಾಂಗ್ರೆಸ್‌ ಅನ್ನು ಕಿತ್ತು ಹಾಕಲು ಕಾರ್ಯಕರ್ತರು ಸನ್ನದ್ಧರಾಗಬೇಕು’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿನ ಹಿಂದೂಗಳ ಹತ್ಯೆಗೆ ಕಾಂಗ್ರೆಸ್‌ ಪಕ್ಷ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಹಿಂದೂಗಳನ್ನು ದೇಶ ಬಿಟ್ಟು ಓಡಿಸಲು ಕುಮ್ಮಕ್ಕು ನೀಡುತ್ತಿದೆ. ಬಿಜೆಪಿಯಲ್ಲಿರುವ ಮುಸ್ಲಿಮರನ್ನು ಸೆಳೆಯಲು ಇನ್ನಿಲ್ಲದ ಪಿತೂರಿಗಳನ್ನು ಮಾಡುತ್ತಿದೆ’ ಎಂದು ದೂರಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌, ಮೈಸೂರು ವಿಭಾಗದ ಸದಸ್ಯ ಕೃಷ್ಣ, ರೈತ ಮೋರ್ಚಾ ಕಾರ್ಯದರ್ಶಿ ಬೆಣ್ಣೂರು ಕುಮಾರ್, ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಇ.ಎಚ್‌.ಲಕ್ಷ್ಮಣ್‌, ಬಿಜೆಪಿ ಮುಖಂಡರಾದ ನವಿಲಹಳ್ಳಿ ಕಿಟ್ಟಿ, ಕಾಂತರಾಜು, ಶಿವಕುಮಾರ್‌, ಬಿ.ಎಂ.ರವಿಕುಮಾರ್‌, ಶೋಭಾ ಗಣೇಶ್‌, ಅಡಗೂರು ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.