ADVERTISEMENT

ಬೆಳೆ ಹಾನಿ: ₹ 3703 ಕೋಟಿ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 7:08 IST
Last Updated 14 ಅಕ್ಟೋಬರ್ 2017, 7:08 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಜಿಲ್ಲೆಯ ರೈತರಿಗೆ ಬೆಳೆ ಹಾನಿಯ ಪರಿಹಾರ ₹ 3703 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ವಾರದ ಗಡುವು ನೀಡಿದ್ದು, ಸ್ಪಂದಿಸದಿದ್ದರೆ ಅ.23 ರಂದು ಮುಖ್ಯಮಂತ್ರಿ ನಿವಾಸದ ಮುಂದೆ ರೈತರೊಂದಿಗೆ ಧರಣಿ ನಡೆಸಲು ಜೆಡಿಎಸ್‌ ಶಾಸಕರು ನಿರ್ಧರಿಸಿದ್ದಾರೆ.

ಬೆಳೆ ಹಾನಿಯ ಪರಿಹಾರದ ವಿವರಗಳನ್ನೊಳಗೊಂಡ ಮನವಿಯನ್ನು ಅ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದ್ದೇವೆ. ಪರಿಶೀಲಿಸಿ ವಾರದೊಳಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಐವರು ಜೆಡಿಎಸ್ ಶಾಸಕರು ಮುಖ್ಯಮಂತ್ರಿ ನಿವಾಸದ ಬಳಿ ರೈತರೊಂದಿಗೆ ಧರಣಿ ನಡೆಸುತ್ತೇವೆ.

ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಂಸದ ಎಚ್.ಡಿ.ದೇವೇಗೌಡರಿಗೂ ಮನವಿ ಮಾಡಲಾಗುವುದು ಎಂದು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್‌.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ 14,191 ಹೆಕ್ಟೇರ್ ಪ್ರದೇಶಲ್ಲಿ ಬೆಳೆದಿರುವ ತೆಂಗಿನ ಮರಗಳ ಪೈಕಿ ಪ್ರಸ್ತಕ್ತ ವರ್ಷ 14.13 ಲಕ್ಷ ತೆಂಗಿನ ಮರಗಳು, 3,84,117 ಅಡಿಕೆ ಮರಗಳು ಬರಗಾಲದಿಂದ ಹಾನಿಗೊಳಗಾಗಿವೆ. ತೆಂಗು ಮತ್ತು ಅಡಿಕೆ ಮರಗಳಿಗೆ ಶೇ 25 ರಷ್ಟು ಪರಿಹಾರ ನಿಗದಿಪಡಿಸಿದರೂ ಒಟ್ಟು ₹ 1287.88 ಕೋಟಿ ಪರಿಹಾರವನ್ನು ತೋಟಗಾರಿಕೆ ಇಲಾಖೆಯೇ ಅಂದಾಜು ಮಾಡಿದೆ.

ಭತ್ತ, ರಾಗಿ, ಜೋಳದ ಬೆಳೆಗೆ ₹ 851 ಕೋಟಿ, ಆಲೂಗಡ್ಡೆ ಬೆಳೆಗೆ ಎಕರೆಗೆ ₹ 40 ಸಾವಿರ ಪರಿಹಾರದಂತೆ ₹ 120 ಕೋಟಿ, ಶುಂಠಿ ಮತ್ತು ಇತರೆ ತೋಟಗಾರಿಕೆ ಬೆಳೆಗಳಿಗೆ ₹ 500 ಕೋಟಿ ಹಾಗೂ ಹೇಮಾವತಿ ಮತ್ತು ಯಗಚಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ನ ಬೆಳೆಹಾನಿಗೆ ₹ 943 ಕೋಟಿ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಬೆಳೆಹಾನಿಯ ವಿವರವನ್ನು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಸಚಿವರ ಗಮನಕ್ಕೂ ತಂದು ಪರಿಹಾರ ಮಂಜೂರಾತಿಗೆ ಸಹಕರಿಸಬೇಕೆಂದು ಕೋರಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ಹಾನಿಯ ಪರಿಹಾರ ನೀಡಬೇಕು.

ದೇವೇಗೌಡರು ಈಗಾಗಲೇ ಬೆಳೆಹಾನಿಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ರಾಜ್ಯದ ಎಲ್ಲಾ ಸಂಸದರೂ ಪಕ್ಷ ಭೇದ ಮರೆತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬೆಳೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ 2016 -17 ನೇ ಸಾಲಿನಲ್ಲಿ ಅನಾವೃಷ್ಠಿಯಿಂದ 16 ಜಿಲ್ಲೆಗಳಲ್ಲಿ 18.31 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ನಾಶವಾಗಿರುವ ಅಡಿಕೆ ಮತ್ತು ತೆಂಗು ಸೇರಿ ಶೇ 25 ರಷ್ಟು ಪರಿಹಾರವಾಗಿ ಒಟ್ಟು ₹ 2072 ಕೋಟಿ ಪರಿಹಾರವನ್ನು ತೋಟಗಾರಿಕೆ ಇಲಾಖೆಯೇ ನಿಗದಿಪಡಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಬೆಳೆಗಾರರಿಗೂ ಸರ್ಕಾರ ಪರಿಹಾರ ನೀಡಲಿ. ಈ ನಿಟ್ಟಿನಲ್ಲಿ ಎಲ್ಲಾ ಶಾಸಕರೂ ಸರ್ಕಾರದ ಮೇಲೆ ಹಾಗೂ ಸಂಸದರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ ಎಂದೂ ಹೇಳಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ, ಅರಸೀಕೆರೆ ನಂತರ ಅತಿ ಹೆಚ್ಚು ತೆಂಗಿನ ಮರಗಳು ಚನ್ನರಾಯಪಟ್ಟಣದಲ್ಲಿ ನಾಶವಾಗಿವೆ. ಪರಿಹಾರ ನೀಡದಿದ್ದರೆ ತೆಂಗು ಬೆಳೆಗಾರರು ಜೀವನ ನಡೆಸುವುದೂ ಕಷ್ಟ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂದೂ ಮನವಿ ಮಾಡಿದರು. ಹಾಸನ ಕ್ಷೇತ್ರದ ಶಾಸಕ ಎಚ್.ಎಸ್.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.