ADVERTISEMENT

ಬ್ಯಾಡರಹಳ್ಳಿ: ಮೂಲಸೌಕರ್ಯದ ಕೊರತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:57 IST
Last Updated 5 ಡಿಸೆಂಬರ್ 2012, 6:57 IST

ಹಿರೀಸಾವೆ: ಹೋಬಳಿ ಕೇಂದ್ರದಿಂದ ನಾಲ್ಕು ಕಿ.ಮೀ.ದೂರದಲ್ಲಿರುವ ಬಾಳಗಂಚಿ ಗ್ರಾಮ ಪಂಚಾಯಿತಿಗೆ ಸೇರಿದ ಬ್ಯಾಡರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಗ್ರಾಮದಲ್ಲಿ 100 ಮನೆಗಳಿದ್ದು, 500 ಜನಸಂಖ್ಯೆ ಹೊಂದಿದೆ. ಬಹುತೇಕ ಜನ ಕೃಷಿ ಅವಲಂಬಿಸಿದ್ದಾರೆ ಈ ಗ್ರಾಮದ ಜನತೆ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮದಲ್ಲಿವೆ.

ಹಲವು ತಿಂಗಳಿನಿಂದ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಯಾವುದೇ ಕೊಳವೆ ಬಾವಿ ಮತ್ತು ಕೈಪಂಪ್‌ಗಳಲ್ಲಿ ನೀರಿಲ್ಲದೆ ಬತ್ತಿಹೋಗಿವೆ. ಕಿರು ನೀರು ಸರಬರಾಜು ಯೋಜನೆ ಟ್ಯಾಂಕ್‌ನಿಂದ ನಾಲ್ಕು-ಐದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಪ್ರತಿ ನಿತ್ಯ ಮಹಿಳೆಯರು ಗ್ರಾಮದ ಅಕ್ಕ-ಪಕ್ಕ ಇರುವ ತೋಟಗಳ ಬೋರ್‌ವೆಲ್‌ಗಳಿಂದ ನೀರನ್ನು ಸಂಗ್ರಹಿಸಬೇಕಿದೆ.

ಹೋನ್ನಮಾರನಹಳ್ಳಿಯಿಂದ ಗ್ರಾಮಕ್ಕೆ ಅಳವಡಿಸಿದ್ದ ಕುಡಿಯುವ ನೀರು ಯೋಜನೆಯ ಪೈಪ್ ಲೈನ್‌ಗೆ ಖಾಸಗಿ ವ್ಯಕ್ತಿಗಳು ತಮ್ಮ ಕೊಳವೆ ಬಾವಿಗಳ ನೀರನ್ನು, ತೋಟಕ್ಕೆ ನೀರು ಸರಬರಾಜು ಮಾಡಲು ಬಳಸಿಕೊಳ್ಳಿತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ದುಃಸ್ಥಿತಿಯಲ್ಲಿದ್ದು, ಎರಡು ವರ್ಷಗಳ ಹಿಂದೆ ಬೀಗಹಾಕಲಾಗಿದೆ, ದುರಸ್ತಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಆಗಿಲ್ಲ. ಗ್ರಾಮಸ್ಥರ ಸಹಕಾರದೊಂದಿಗೆ ಹಳೆಯ ಮನೆಯೊಂದರಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದೆ, ಅದೂ ಶಿಥಿಲವಾಗಿದೆ.  

ಹಿರೀಸಾವೆ-ತುರುವೇಕೆರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಈ ಗ್ರಾಮದಲ್ಲಿ ಹಾದುಹೋಗಿದೆ, ಶಾಲೆ ಮುಂಭಾಗದಲ್ಲಿ ತಿರುವಿದ್ದು, ರಸ್ತೆ ಉಬ್ಬು ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ.

ಗ್ರಾಮದ ಬಹುತೇಕ ಬಿದಿಗಳು ಮಣ್ಣಿನ ರಸ್ತೆಗಳಾಗಿವೆ, ಸುವರ್ಣ ಗ್ರಾಮ ಯೋಜನೆ ಇನ್ನೂ ಈ ಹಳ್ಳಿಗೆ ಬಂದಿಲ್ಲ. ರಸ್ತೆಗಳ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ಕೊಳಚೆ ನೀರು ರಸ್ತೆಯ ಮದ್ಯದಲ್ಲಿ ಹರಿಯುತ್ತಿದ್ದು, ರಸ್ತೆಯಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಯೋಗೆಶ್ ಆರೋಪಿಸುತ್ತಾರೆ.

ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಬ್ಯಾಡರಹಳ್ಳಿ ಗ್ರಾಮದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಬೇಕಿದೆ.
ಹಿ.ಕೃ.ಚಂದ್ರು, ಹಿರೀಸಾವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.