ADVERTISEMENT

ಭಕ್ತರಿಂದ ಬಸವ ಮಾಲೆ ವಿಸರ್ಜನೆ

ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ತೆಪ್ಪೋತ್ಸವ ಕಾರ್ಯಕ್ರಮ; ಮೆರವಣಿಗೆಯಲ್ಲಿ ಕಲಾತಂಡಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 9:49 IST
Last Updated 16 ಜನವರಿ 2016, 9:49 IST
ಹಿರೀಸಾವೆ ಹೋಬಳಿಯ ಕಬ್ಬಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಬಸವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು
ಹಿರೀಸಾವೆ ಹೋಬಳಿಯ ಕಬ್ಬಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಬಸವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು   

ಹಿರೀಸಾವೆ: ಹೋಬಳಿಯ ಕಬ್ಬಳಿಯ ಬಸವೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ವ್ರತ ಕೈಗೊಂಡಿದ್ದ ಸಾವಿರಾರು ಭಕ್ತರು ಶುಕ್ರವಾರ ಬೆಳಗಿನ ಜಾವ ದೇವರ ಸನ್ನಿಧಿಯಲ್ಲಿ ಬಸವ ಮಾಲೆಯನ್ನು ವಿಸರ್ಜನೆ ಮಾಡಿದರು.

ಅಯ್ಯಪ್ಪಸ್ವಾಮಿಗೆ ಮಾಲೆ ಧರಿಸವ ಮಾದರಿಯಲ್ಲಿಯೆ, ಕಬ್ಬಳಿ ಬಸವೇಶ್ವರ ಸ್ವಾಮಿಗೆ ಸಾವಿರಾರು ಭಕ್ತರು ಧನುರ್ಮಾಸದ ಪ್ರಾರಂಭದಿಂದ ಬಸವಮಾಲೆಯನ್ನು ಧರಿಸಿ ವ್ರತ ಕೈಗೊಂಡಿದ್ದರು. ಈ ಆಚರಣೆಯು ಕಳೆದ 29 ವರ್ಷಗಳಿಂದ ನಡೆಯುತ್ತಿದ್ದೆ.

ಮಾಲೆ ಧರಿಸುವುದಕ್ಕಿಂತ ಮೊದಲು ದೇವಸ್ಥಾನದಿಂದ ಕಳಶವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ, ಪ್ರತಿಷ್ಠಾಪನೆ ಮಾಡಿ, ಪ್ರತಿ ನಿತ್ಯ ವಿಶೇಷ ಪೂಜೆ ಮತ್ತು ಭಜನೆಗಳನ್ನು ಮಾಡುವ ಮೂಲಕ ವ್ರತವನ್ನು ಆಚರಣೆ ಮಾಡುತ್ತಾರೆ.

ತಮ್ಮ ಗ್ರಾಮದೇವತೆ, ವಿವಿಧ ಕಲಾ ತಂಡಗಳೊಂದಿಗೆ ಮತ್ತು ಕಳಶದೊಂದಿಗೆ ಮೆರವಣಿಗೆಯಲ್ಲಿ ಗುರುವಾರ ರಾತ್ರಿ ಮಾಲಾಧಾರಿಗಳು ದೇವಸ್ಥಾನದ ಆವರಣವನ್ನು ಸೇರಿದರು. 

ದೇವಸ್ಥಾನದ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಬಸವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವದ ಕಾರ್ಯಕ್ರಮ ನಡೆಯಿತು. ನಂತರ ಶುಕ್ರವಾರ ಬೆಳಗಿನ ಜಾವ ದೇವಸ್ಥಾನದ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ತಾವು ತೊಟ್ಟಿದ್ದ ವಸ್ತ್ರ ಮತ್ತು ಮಾಲೆಯನ್ನು ತೆಗೆದರು. 

ಚನ್ನರಾಯಪಟ್ಟಣ, ತುರುವೆಕೆರೆ, ತಿಪಟೂರು ಮತ್ತು ಅರಸೀಕೆರೆ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಬ್ಬಳಿ ಗ್ರಾಮಕ್ಕೆ ಕರೆತಂದಿದ್ದರು. ವಿವಿಧ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ದೇವಸ್ಥಾನದ ಆವರಣದಲ್ಲಿ ಭಕ್ತರು ಗುರುವಾರ ಸಂಜೆಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಭಜನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ತೆಂಗು ಬೆಳೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ಸೇರಿದಂತೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.

ವಿವಿಧ ತಾಲ್ಲೂಕುಗಳ ಹಲವು ಗ್ರಾಮಗಳಿಂದ ಆಗಮಿಸಿರುವ ಎಲ್ಲ ದೇವರಿಗೆ ಕಬ್ಬಳಿಯ ಬಸವೇಶ್ವರ ದೇವಸ್ಥಾನದ ವತಿಯಿಂದ ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆಸಲ್ಲಿಸಿ, ಮಡ್ಲಕ್ಕಿ ಗೌರವ ಅರ್ಪಿಸಿ, ದೇವರುಗಳನ್ನು ಕಳುಹಿಸಿ ಕೊಟ್ಟಿರುವುದಾಗಿ ಶಂಭುನಾಥ ಸ್ವಾಮೀಜಿ ತಿಳಿಸಿದರು. ಸಂಕ್ರಾಂತಿ ಹಬ್ಬದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಬಸವೇಶ್ವರ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.