ADVERTISEMENT

ಭ್ರಷ್ಟಾಚಾರ ಸಹಿಸುವುದಿಲ್ಲ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:37 IST
Last Updated 25 ಸೆಪ್ಟೆಂಬರ್ 2013, 8:37 IST

ಸಕಲೇಶಪುರ: ‘ಇಲಾಖೆಯ ಸಿಬ್ಬಂದಿ ಕೆಲಸ ಮಾಡದೆ ಇದ್ದರೂ ಸಹಿಸುತ್ತೇನೆ. ಆದರೆ, ಭ್ರಷ್ಟ್ರಾಚಾರವನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪೊಲೀಸ್‌ ಇಲಾಖೆಯಿಂದ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಪಡೆದು ಅವರು ಮಾತನಾಡಿದರು.

ರಾತ್ರಿ ವೇಳೆ ಕಾನೂನು ಬಾಹಿರವಾಗಿ ಮರಳು ಸಾಗಾಟ ಮಾಡುವವರಿಂದ ಕೆಲ ಪೊಲೀಸರು ಹಣ ವಸೂಲಿ ಮಾಡಿ, ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕೆಲವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿ­ಸಿದ ಎಸ್ಪಿ, ಸಾಕ್ಷಿ ಸಮೇತ ಮಾಹಿತಿ ನೀಡಿದರೆ ಆ ಕ್ಷಣದಲ್ಲಿಯೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯ ಪ್ರತಿಯೊಬ್ಬರೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌರವ ಹಾಗೂ ರಕ್ಷಣೆ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡ­ಲಾ­ಗಿ­ದೆ. ಇಲಾಖೆ ಸಿಬ್ಬಂದಿ ಕಾನೂನು ಪಾಲನೆ ಮಾಡುವ ಸಂದರ್ಭದಲ್ಲಿ ಸಾರ್ವಜನಿ­ಕರು ಕೂಡ ಗೌರವ ಹಾಗೂ ಸಹಕಾರ ನೀಡಬೇಕು ಎಂದು ಕೋರಿದರು.
ಮದ್ಯದ ಅಂಗಡಿಗಳ ಕೌಂಟರ್‌ಗಳಲ್ಲಿ­ಯೇ ನಿಂತು ಕುಡಿಯುವುದರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಅಂತಹ ಎರಡು ಅಂಗಡಿಗಳ ಪರವಾನಗಿ ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

ಯಾವುದೇ ಸಂದರ್ಭದಲ್ಲಿಯೂ ನ್ಯಾಯ ಸಿಗಲಿಲ್ಲ ಎಂದು ಜನ ಹತಾಶ­ರಾಗಬಾರದು. ಎಲ್ಲರನ್ನೂ ರಕ್ಷಣೆ ಮಾಡು­ವಂತಹ ಪ್ರಬಲವಾದ ಕಾನೂನು­ಗಳು ನಮ್ಮ ದೇಶದಲ್ಲಿ ಇವೆ. ಆ ಉದ್ದೇಶದಿಂದಲೇ ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಶಾಲಾ ಮಕ್ಕಳಿಗೆ ಪೊಲೀಸ್‌ ವ್ಯವಸ್ಥೆ, ಕಾನೂನಿನ ತಿಳಿವಳಿಕೆ ನೀಡುತ್ತಿದೆ ಎಂದರು.

ಇನ್‌ಸ್ಪೆಕ್ಟರ್‌ ದಿನೇಶ್‌ ಪಾಟೀಲ್‌, ಗ್ರಾಮಾಂತರ ಪಿಎಸ್‌ಐ ಭರತ್‌ಗೌಡ, ಪುರಸಭೆ ಅಧ್ಯಕ್ಷ ಸತೀಶ್‌, ಸದಸ್ಯ ಸಂತೋಷ್‌ಕುಮಾರ್‌ ಜೈನ್‌, ಸುರೇಶ್‌­ಗೌಡ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿ, ಕಾರ್ಯದರ್ಶಿ ಮಲ್ನಾಡ್‌ ಮಹಬೂಬ್‌, ಲಕ್ಷ್ಮಣ್‌ ಕೀರ್ತಿ, ಕಲ್ಪನಾ ಕೀರ್ತಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.