ADVERTISEMENT

ಮರಳು ಅಕ್ರಮ ತಡೆಗೆ ಯತ್ನ: ತಹಶೀಲ್ದಾರ್ ಜೀಪ್‌ಗೆ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 8:30 IST
Last Updated 11 ಫೆಬ್ರುವರಿ 2012, 8:30 IST

ಬೇಲೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ತಡೆಯಲು ಹೋದ ಪ್ರಭಾರ ತಹಶೀಲ್ದಾರ್ ಅಣ್ಣೇಗೌಡ ಅವರ ಜೀಪ್‌ಗೆ ಟ್ರಾಕ್ಟರ್‌ನಿಂದ ಡಿಕ್ಕಿ ಹೊಡೆಸಿದ್ದಲ್ಲದೆ, ತಹಶೀಲ್ದಾರ್ ಮತ್ತು ಜೀಪ್ ಚಾಲಕ ಗಿಡ್ಡೇಗೌಡ ಅವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.

ಪ್ರಭಾರ ತಹಶೀಲ್ದಾರ್ ಅಣ್ಣೇಗೌಡ ಅವರು ಚಾಲಕ ಗಿಡ್ಡೇಗೌಡರೊಂದಿಗೆ ಮಲ್ಲಾಪುರದಿಂದ ಬೇಲೂರಿಗೆ ಜೀಪ್‌ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ವಿಷ್ಣು ಸಮುದ್ರ ಕೆರೆಯ ಏರಿ ಮೇಲೆ ಕೆ.ಎ.13-5580 ಎಂಬ ಟ್ರಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದನ್ನು ಕಂಡು ಟ್ರಾಕ್ಟರ್ ನಿಲ್ಲಿಸಲು ಸೂಚಿಸಿದರು. ಆದರೆ ಚಾಲಕ ಟ್ರಾಕ್ಟರ್‌ನ್ನು ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಟ್ರಾಕ್ಟರ್ ಬೆನ್ನಟ್ಟಿ ಪಟ್ಟಣದ ಜೆ.ಪಿ.ನಗರ ಬಡಾವಣೆ ಬಳಿ ಅಡ್ಡಗಟ್ಟಿದರು.

`ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಾಳೆಗೆರೆ ಕುಮಾರ ಎಂಬಾತ ಅಸಭ್ಯವಾಗಿ ವರ್ತಿಸಿದ್ದಲ್ಲದೆ ತಮ್ಮ  ಮೇಲೆ ಹಲ್ಲೆ ಯತ್ನ ನಡೆಸಿ, ಟ್ರಾಕ್ಟರ್‌ನಲ್ಲಿ ನಿಡಗೋಡು ಕಡೆಗೆ ಕದ್ದು ಸಾಗಿಸಿರು ವುದಾಗಿ~ ಪ್ರಭಾರ ತಹಶೀಲ್ದಾರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಟ್ರಾಕ್ಟರ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗುವಾಗ ಜೀಪ್‌ಗೆ ಡಿಕ್ಕಿ ಹೊಡೆದು ಜಖಂಗೊಳಿಸಲಾಗಿದೆ. ಟ್ರಾಕ್ಟರ್ ಯದುಮೂರ್ತಿ ಎಂಬಾತನಿಗೆ ಸೇರಿದ್ದು, ಇವರಿಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.