ADVERTISEMENT

ಮರಳು ಲಾರಿ ಸಂಚಾರ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 10:00 IST
Last Updated 4 ಮಾರ್ಚ್ 2012, 10:00 IST

ಸಕಲೇಶಪುರ: ತಾಲ್ಲೂಕಿನ ಶುಕ್ರವಾರ ಸಂತೆ ಸಮೀಪದ ಬೆಳ್ಳೂರು ಗ್ರಾಮದ ಹೇಮಾವತಿ ನದಿ ಪಾತ್ರದಿಂದ ಮರಳು ಸಾಗಣೆ ವಿರೋಧಿಸಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ಕಾರ್ಯಕರ್ತೆಯರು ಶನಿವಾರ ಮರಳು ಲಾರಿ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ಮರಳು ಲಾರಿಗಳ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ. ಮಣ್ಣಿನ ರಸ್ತೆ ಯಲ್ಲಿ ಭಾರೀ ತೂಕ ಹೊತ್ತು ಸಾಗುವ ಲಾರಿಗಳಿಂದ ಏಳುವ ದೂಳು ಅಕ್ಕ ಪಕ್ಕದ ಮನೆಗಳಿಗೆ ನುಗ್ಗುತ್ತದೆ. ತಿನ್ನುವ ಆಹಾರ, ಮನೆಯಲ್ಲಿಟ್ಟ ವಸ್ತುಗಳು, ಬಟ್ಟೆಗಳ ಮೇಲೆ ಮಣ್ಣು ತುಂಬಿ ಜೀವನ ಕಷ್ಟಕರವಾಗಿದೆ.

ಮರಳು ಲಾರಿಗಳ ಸಂಚಾರವನ್ನು ನಿಷೇಧಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಗ್ರಾಮದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಆದರೂ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಶುಕ್ರವಾರ ರಾತ್ರಿಯಿಂದಲೇ ಪ್ರತಿಭಟನೆಗೆ ಇಳಿದಿದ್ದರು. ರಾತ್ರಿ ನದಿಯಿಂದ ಮರಳು ತುಂಬಿಕೊಂಡು ಹೊರಟ ಲಾರಿಗಳನ್ನೆಲ್ಲ ತಡೆದಿದ್ದರು. 

  ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ರಸ್ತೆಯಲ್ಲಿಯೇ ಚಾಪೆ ಹಾಕಿಕೊಂಡು ರಾತ್ರಿಯೆಲ್ಲ ಪ್ರತಿಭಟನೆ ನಡೆಸಿದ್ದಲ್ಲದೆ, ಸ್ಥಳಕ್ಕೆ ಅಧಿಕಾರಿಗಳು ಬರಬೇಕು ಎಂದು ಆಗ್ರಹಿಸಿ ಶನಿವಾರ ಇಡೀ ದಿನ ಪ್ರತಿಭಟಿಸಿದರು.

ಸಂಜೆ 4ರವರೆಗೂ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಆಲಿಸಲಿಲ್ಲ, ಎಂದು ರೊಚ್ಚಿಗೆದ್ದ ಮಹಿಳೆಯರು ಲಾರಿಗಳನ್ನು ಜಖಂ ಗೊಳಿಸಲು ಮುಂದಾದರು. ಅಷ್ಟರಲ್ಲಿ ತಹಶೀಲ್ದಾರ್ ಚಂದ್ರಮ್ಮ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನ ವೊಲಿಸಲು ಪ್ರಯತ್ನಿಸಿದರು.
 
ಮೊದಲೇ ಆಕ್ರೋಶಗೊಂಡಿದ್ದ ಮಹಿಳೆಯರು ವಾಗ್ದಾಳಿ ನಡೆಸಿ, ತಹಶೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಅವರನ್ನು ಸುತ್ತುವರೆದರು. ನ್ಯಾಯ ದೊರಕು ವವರೆಗೂ ಲಾರಿಗಳನ್ನು ಬಿಡು ವುದಿಲ್ಲ.  ಜೈಲಿಗೆ ಸೇರಿದರೂ, ಪ್ರಾಣ ಹೋದರೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ತಹಶೀಲ್ದಾರ್ ಚಂದ್ರಮ್ಮ ಮಾತನಾಡಿ, `ಅಧಿಕ ಭಾರ ಹೊತ್ತು ಮರಳು ಸಾಗಿಸುವ ಲಾರಿಗಳು ಹಾಗೂ ಸಂಬಂಧಿಸಿದ ಎಂಜಿನಿಯರ್ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾ ರಿಯವರಿಗೆ ಶಿಫಾರಸು ಮಾಡುತ್ತೇನೆ, ಬಾಲಕ ಹಾಗೂ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಚಾಲಕನ ವಿರುದ್ದ ಕೂಲೇ ಕ್ರಮ ಕೈಗೊಳ್ಳಲಾ ಗುವುದು ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.