ADVERTISEMENT

ಮಾಗಲು: ಹೇಮಾವತಿ ನದಿಯಲ್ಲಿ ಮರಳು ದಂಧೆ ಅವ್ಯಾಹತ

ಪ್ರಜಾವಾಣಿ ವಿಶೇಷ
Published 6 ಏಪ್ರಿಲ್ 2013, 6:04 IST
Last Updated 6 ಏಪ್ರಿಲ್ 2013, 6:04 IST

ಸಕಲೇಶಪುರ: ತಾಲ್ಲೂಕಿನ ಮಾಗಲು ಗ್ರಾಮದಲ್ಲಿ ಜಿಲ್ಲೆಯ ಹೇಮಾವತಿ ನದಿಯಿಂದ ಭಾರಿ ಪ್ರಮಾಣದಲ್ಲಿ ಮರಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ.
ನದಿಯ ದಡದಲ್ಲಿನ ಮರಳು ತೆಗೆದು ಲಾರಿಗಳಿಗೆ ತುಂಬಿಸಲು ಗುತ್ತಿಗೆ ಪಡೆದಿರುವ ಆಂಧ್ರಪ್ರದೇಶ ಮೂಲದ ರಮೇಶ್ ಅವರು ಪರವನಾಗಿಯ ಷರತ್ತುಗಳನ್ನು ಉಲ್ಲಂಘಿಸಿ ನದಿ ಯೊಳಗಿಂದ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದಾರೆ. ಹರಿಯುವ ನದಿ ಯೊಳಗಿನ ಮರಳು ತೆಗೆಯುವುದಾಗಲಿ, ಹರಿಯುವ ನದಿಯ ದಿಕ್ಕು ಬದಲಿಸು ವುದಾಗಲಿ, ನದಿಯೊಳಕ್ಕೆ ಯಂತ್ರಗ ಳನ್ನು ಇಳಿಸಿ ಮರಳು ತೆಗೆಯುವುದು, ನದಿಯ ಒಳಗೆ ಲಾರಿಗಳನ್ನು ಓಡಿಸು ವುದು, ನದಿಗೆ ಕಲ್ಲು, ಮಣ್ಣು ತುಂಬಿಸಿ ದಾರಿ ಮಾಡುವುದು ನಿಯಮ ಉಲ್ಲಂಘನೆಯಾಗಿದೆ.

ಈ ಗುತ್ತಿಗೆದಾರರು ಜೆಸಿಬಿ ಯಂತ್ರ ವನ್ನು ನದಿಯೊಳಕ್ಕೆ ಇಳಿಸಿ 15 ರಿಂದ 20 ಅಡಿಗಳ ಆಳದಿಂದ ಮರಳು ತೆಗೆಯುತ್ತಿದ್ದಾರೆ. ನಿತ್ಯ 300ಕ್ಕೂ ಹೆಚ್ಚು ಲಾರಿಗಳು ಈ ನದಿಯಿಂದ ಮರಳು ಸಾಗಣೆ ಮಾಡುತ್ತಿವೆ. ನದಿ ಯೊಳಗೆ ಮರಳು ದಂಧೆ ನಡೆಯು ತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದೇ ಗುತ್ತಿಗೆದಾರ ಆಲೇಬೇಲೂರಿ ನಿಂದ ವಡೂರಿನ ವರೆಗೂ ಸುಮಾರು  ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹೇಮಾವತಿ ನದಿ ಹರಿಯುವ ದಿಕ್ಕನ್ನೇ ಬದಲಿಸಿ, ಅಕ್ರಮವಾಗಿ ರಸ್ತೆ ನಿರ್ಮಾಣ, ಹರಿಯುವ ನದಿಯನ್ನು 15ರಿಂದ 20 ಅಡಿಗಳ ಆಳದ ವರೆಗೆ ಬಗೆದು ನದಿಯ ಮೂಲ ಸ್ವರೂಪವನ್ನು ಹಾಳು ಮಾಡಿದ್ದರಿಂದ ಅಲ್ಲಿ ಮರಳು ತೆಗೆಯದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಈ ಆದೇಶದ ಬೆನ್ನ ಹಿಂದೆಯೇ ಮಾಗಲು ಗ್ರಾಮದಲ್ಲಿಯೂ ನಿಯಮ ಬಾಹಿರವಾಗಿ ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವುದು ಸೋಜಿಗ ಸಂಗತಿಯಾಗಿದೆ. ಈ ದಂಧೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಹನುಮಂತರೆಡ್ಡಿ ಸಹಕಾರವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವ ಗುತ್ತಿಗೆದಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಹನುಮಂತರೆಡ್ಡಿ ಹಾಗೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಗ್ರಾಮಸ್ಥ ಪುನಿತ್ `ಪ್ರಜಾವಾಣಿ'ಗೆ ಹೇಳಿದರು.

ಲೋಕೋಪಯೋಗಿ ಇಲಾಖೆ  ಹೇಳಿಕೆ: ಹೇಮಾವತಿ ನದಿಯ ಮಾಗಲು ಗ್ರಾಮದ ಒಂದು ಬ್ಲಾಕ್‌ನಿಂದ ಮರಳು ತೆಗೆದು ಲಾರಿಗಳಿಗೆ ತುಂಬಿಸುವ ಗುತ್ತಿಗೆಯನ್ನು ರಮೇಶ್ ಅವರಿಗೆ ನೀಡಲಾಗಿದೆ. ನದಿಯ ದಡದಲ್ಲಿ ಮಾತ್ರ ಮರಳು ತೆಗೆಯುವಂತೆ ಅವರಿಗೆ ನೀಡಿರುವ ಪರವಾನಗಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹರಿಯುವ ನದಿಗೆ ಯಂತ್ರಗಳನ್ನು ಇಳಿಸಿ ಮರಳು ಬಗೆಯುವುದು, ನದಿ ಹರಿಯುವ ದಿಕ್ಕು ಬದಲಿಸುವುದು ಕಾನೂನು ಬಾಹಿರವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಪುಟ್ಟಹನುಮಂತರಾಜು ಹೇಳಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳಿಕೆ: ಹರಿಯುವ ನದಿಯಿಂದ ಯಂತ್ರಗಳನ್ನು ಬಳಸಿಯಾಗಲಿ ಬೇರೆ ಯಾವುದೇ ರೀತಿಯಿಂದಲೂ ಮರಳು ತೆಗೆಯುವುದು ಕಾನೂನು ಬಾಹಿರವಾಗುತ್ತದೆ. ನದಿಯ ದಡದಲ್ಲಿ ಇರುವ ಮರಳನ್ನು ಮಾತ್ರವೇ ತೆಗೆದು ಸಾಗಿಸಬೇಕು. ಸರ್ಕಾರದಿಂದ ಪರವಾನಗಿ ನೀಡಲಾಗುವುದೇ ಹೊರತು, ನದಿಯನ್ನು ಬಗೆದು ಮರಳು ತೆಗೆದರೆ ಶಿಕ್ಷೆಗೆ ಒಳಗಾಗುತ್ತಾರೆ. ಹರಿಯುವ ನದಿಯನ್ನು ಬಗೆದು ಮರಳು ತೆಗೆಯುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುವುದರ ಜೊತೆಗೆ ಗುತ್ತಿಗೆ ರದ್ದುಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಹನುಮಂತರೆಡ್ಡಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.