ADVERTISEMENT

ಮೀಸಲು ಕ್ಷೇತ್ರದ ಮೇಲೆ ವಲಸಿಗರ ಕಣ್ಣು

ಜೆಡಿಎಸ್‌ ಹಾಲಿ ಶಾಸಕರಿಗೆ ಟಿಕೆಟ್‌, ಕಾಂಗ್ರೆಸ್‌, ಬಿಜೆಪಿಯಿಂದ ಆಕಾಂಕ್ಷಿಗಳ ದಂಡು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 8:37 IST
Last Updated 10 ಏಪ್ರಿಲ್ 2018, 8:37 IST

ಹಾಸನ: ಸಕಲೇಶಪುರ– ಆಲೂರು ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಈ ಬಾರಿ ವಲಸಿಗರು ಹೆಚ್ಚು ಕಣ್ಣಿಟ್ಟಿದ್ದಾರೆ.ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ಮೀಸಲು ಕ್ಷೇತ್ರವಾಗಿ ರೂಪುಗೊಂಡಿತು. ಆಲೂರು, ಸಕಲೇಶಪುರ ತಾಲ್ಲೂಕುಗಳ ಜತೆಗೆ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿ ಕೂಡ ಇದೇ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತು.

ಸ್ಥಳೀಯ ಆಕಾಂಕ್ಷಿಗಳಿದ್ದರೂ ಅನ್ಯ ಕ್ಷೇತ್ರದ ರಾಜಕೀಯ ಮುಖಂಡರು ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.
ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದ ಬೇಲೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಚ್‌.ಕೆ.ಕುಮಾರಸ್ವಾಮಿ 2008ರಿಂದ ಕ್ಷೇತ್ರ ಬದಲಿಸಿ ಸಕಲೇಶಪುರ–ಆಲೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾದ ಬೆಂಗಳೂರಿನ ಉದ್ಯಮಿ ನಾರ್ವೆ ಸೋಮಶೇಖರ್‌, ಕ್ಷೇತ್ರದಲ್ಲಿ ಫ್ಲೆಕ್ಸ್‌ ಮತ್ತು ಬಾಡೂಟದ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಕೆಲ ದಿನಗಳ ಸಕಲೇಶಪುರದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎ.ಎಸ್‌.ಯಡಿಯೂರಪ್ಪ, ಸೋಮಶೇಖರ್‌ ಅವರನ್ನು ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಿಸಿದ್ದರಿಂದ ಅವರ ಪ್ರಚಾರ ಬಿರುಸಾಗಿದೆ.
ಇಷ್ಟಾದರೂ ಬಿಜೆಪಿಯಿಂದ ಡಾ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್‌, ಮುರುಳಿ ಮೋಹನ್‌ ಟಿಕೆಟ್‌ಗಾಗಿ ಪ್ರಯತ್ನ ಮುಂದುವರೆಸಿದ್ದಾರೆ.

ADVERTISEMENT

ದಲಿತರಲ್ಲಿ ಎಡಗೈ ಪಂಗಡಕ್ಕೆ ಸೇರಿದ ಸೋಮಶೇಖರ್‌ ಕ್ಷೇತ್ರದ ಎಲ್ಲ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಮತ ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ. ಬಿಜೆಪಿ ದಿಢೀರ್‌ ಶಕ್ತಿ ವೃದ್ಧಿಸಿಕೊಂಡಿರುವುದು ಹಾಗೂ ಸೋಮಶೇಖರ್‌, ಸಂಘಟನೆ ಮತ್ತು  ಮತ ಸೆಳೆಯಲು ಸಂಪನ್ಮೂಲ ವ್ಯಯಿಸುತ್ತಿರುವುದು ಕುಮಾರಸ್ವಾಮಿ ಅವರ ಚಿಂತೆಗೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಈವರೆಗೂ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಸ್ಪಷ್ಟವಾಗಿಲ್ಲ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಡಿ.ಎನ್‌.ಮಲ್ಲೇಶ್‌, ಸಿದ್ದರಾಮಯ್ಯ ಜತೆ ಆತ್ಮೀಯತೆ ಹೊಂದಿರುವ ಕಾರಣದಿಂದ ಟಿಕೆಟ್‌ ಪಡೆಯಬಹುದು ಎನ್ನಲಾಗುತ್ತಿದೆ. ಸಚಿವ ಎಚ್‌.ಸಿ.ಮಹದೇವಪ್ಪ, ಛಲವಾದಿ ಮಹಾಸಭಾದ ಅಧ್ಯಕ್ಷ ಛಲವಾದಿ ಕುಮಾರ್‌, ಡಿ.ಸಿ.ಸಣ್ಣಸ್ವಾಮಿ, ಪರ್ವತಯ್ಯ, ಜಿಗಣಿ ಕೃಷ್ಣಪ್ಪ ಸೇರಿದಂತೆ 17 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ, ಲಾಬಿ ನಡೆಸುತ್ತಿದ್ದಾರೆ.

ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಎತ್ತಿನ ಹೊಳೆ ಯೋಜನೆ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಇದರ ನಡುವೆಯೇ ಅಭ್ಯರ್ಥಿಗಳು ಮತಯಾಚಿಸಬೇಕಿದೆ.

2013ರ ಫಲಿತಾಂಶ

ಜೆಡಿಎಸ್‌: ಎಚ್‌.ಕೆ.ಕುಮಾರಸ್ವಾಮಿ 63,602 (ಗೆಲುವಿನ ಅಂತರ–33,069)

ಕಾಂಗ್ರೆಸ್‌:ಡಿ.ಮಲ್ಲೇಶ್‌ –30533 (ಸಮೀಪದ ಸ್ಪರ್ಧಿ)

ಕೆ.ಜೆ.ಪಿ:ಬೆಳಗೋಡು ಉಮೇಶ್–28117

ಬಿಜೆಪಿ: ಡಾ.ನಾರಾಯಣಸ್ವಾಮಿ–7336

ಬಿಎಸ್‌ಪಿ: ಕುಮಾರ್‌ ಗೌರವ್‌–4424

ಮೂರು ಸಮುದಾಯದ ಪ್ರಾಬಲ್ಯ

ಕ್ಷೇತ್ರದಲ್ಲಿ ದಲಿತ ಮತದಾರರೇ ನಿರ್ಣಾಯಕರಾಗಿದ್ದರೂ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜದ ಮತದಾರರು ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರಕ್ಕೆ ಕಟ್ಟಾಯ ಹೋಬಳಿ ಸೇರ್ಪಡೆಯಾದ ನಂತರ ಒಕ್ಕಲಿಗರ ಮತಗಳು ನಿರ್ಣಾಯಕವಾಗಿದೆ. ಒಕ್ಕಲಿಗರು ಜೆಡಿಎಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ ಆಗಿದ್ದರೂ ದಲಿತರು, ಲಿಂಗಾಯತ ಮತಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಕ್ಕಿಸಿಕೊಳ್ಳುವ ಮೂಲಕ ಪ್ರಾಬಲ್ಯ ಉಳಿಸಿಕೊಂಡಿತ್ತು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರು ದಲಿತ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವರೋ ಅವರು ಗೆಲವಿನ ದಡ ಸೇರುವರು.

**

ಜೆಡಿಎಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕಾಂಗ್ರೆಸ್‌, ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ ತನ್ನನ್ನು ಬೆಂಬಲಿಸಲಿದ್ದಾರೆ – ಎಚ್‌.ಕೆ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕ.

**

ಸಕಲೇಶಪುರ ಕ್ಷೇತ್ರದಲ್ಲಿ ಕಾಡಾನೆ ಹಾವಳಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿದೆ. ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ – ನಾರ್ವೆ ಸೋಮಶೇಖರ್‌, ಬಿಜೆಪಿ ಟಿಕೆಟ್‌ ಆಕಾಂಕ್ಷಿ

**

2013ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ವರಿಷ್ಠರು ಟಿಕೆಟ್‌ ನೀಡುವ ವಿಶ್ವಾಸ ಇದೆ – ಡಿ.ಮಲೇಶ್‌, ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ.

**

ಕೆ.ಎಸ್‌.ಸುನಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.