ADVERTISEMENT

ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ

ಮಳೆ ಬಿರುಸು ಹಿನ್ನೆಲೆ: ಶಾಸಕ ಎಚ್‌.ಕೆ.ಕುಮಾರಸ್ವಾಮಿ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:50 IST
Last Updated 12 ಜೂನ್ 2018, 11:50 IST

ಸಕಲೇಶಪುರ: ‘ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು ಎಂದು ಶಾಸಕ ಎಚ್‍.ಕೆ.ಕುಮಾರಸ್ವಾಮಿ ಸೋಮವಾರ ಸೂಚಿಸಿದರು.

ತಾಲ್ಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕುರಿತು ಚರ್ಚಿಸಲು ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

‘ತಾಲ್ಲೂಕಿನಲ್ಲಿ ಎಲ್ಲೆಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿ ಆಗಿದೆ. ಲೋಕೋಪಯೋಗಿ, ಜಿ.ಪಂ. ಇಲಾಖೆಗಳ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆಗಳ ಸ್ಥಿತಿ ಹೀಗೇ ಇದೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಆದ್ಯತೆ ಮೇಲೆ ರಸ್ತೆಯಲ್ಲಿ ನೀರು ನಿಲ್ಲದಂತೆ  ಹಾಗೂ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು’ ಎಂದು ಹೇಳಿದರು.

‘ವಿದ್ಯುತ್‍ ಮಾರ್ಗ ಹಾಗೂ ರಸ್ತೆ ಬದಿಯಲ್ಲಿ ಸಡಿಲವಾದ ಮರಗಳನ್ನು ಗುರುತಿಸಿ ತಕ್ಷಣ ತೆಗೆಯುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಹಕರಿಸಬೇಕು’ ಎಂದರು.

‘ಮಳೆ ಹಾಗೂ ಗಾಳಿಯಿಂದ ಮರಗಳು, ಕೊಂಬೆಗಳು ಬೀಳುವ ಮಾಹಿತಿ ಇದ್ದರೂ ಸೆಸ್ಕ್‌ ಅಧಿಕಾರಿಗಳು ಏಕೆ ಮುಂಜಾಗ್ರತೆ ವಹಿಸಿಲ್ಲ. ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಿಗೆ ಒಂದು ವಾರದಿಂದ, ಪಟ್ಟಣ ಪ್ರದೇಶದಲ್ಲಿ ಎರಡು ದಿನಗಳಿಂದ ವಿದ್ಯುತ್‍ ಸಂಪರ್ಕ ಕಡಿತವಾಗಿದೆ. ನೀರು ಪೂರೈಕೆ ಮೇಲೂ ಸಮಸ್ಯೆಯಾಗಿದೆ. ಸೆಸ್ಕ್ ನಿರ್ಲಕ್ಷ್ಯ ಇದಕ್ಕೆ ಕಾರಣ‘ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.

ಸೆಸ್ಕ್‌ನ ಕೆಲ ಎಂಜಿನಿಯರುಗಳು ಕರೆ ಮಾಡಿದರೂ ಸ್ಪಂದಿಸುವುದಿಲ್ಲ ಎಂಬ ಮಾಹಿತಿ ಇದೆ. ಜನರಿಗೆ ಸ್ಪಂದಿಸದ ಇಂಥವರ ವಿರುದ್ಧ ಕ್ರಮವಹಿಸಬೇಕು ಎಂದು ಎಇಇ ನಾರಾಯಣ ಬೋವಿ ಅವರಿಗೆ ಹೇಳಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಸೆಸ್ಕ್‌ನಲ್ಲಿ ಹುದ್ದೆಗಳು ಖಾಲಿ ಇವೆ. ಹೀಗಾಗಿ, ಪ್ರಭಾವಕ್ಕೆ ಮಣಿದು ಯಾರನ್ನು ವರ್ಗಾವಣೆ ಮಾಡಬಾರದು. ವರ್ಗಾವಣೆಗೆ ಮುನ್ನ ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಅಧಿಕ ಮಳೆ

ತಾಲ್ಲೂಕು ವ್ಯಾಪ್ತಿಯಲ್ಲಿ ಜೂನ್‍ 11ರ ವೇಳೆಗೆ ವಾಡಿಕೆಯಂತೆ 300 ಮಿ.ಮೀ ಮಳೆ ಆಗಬೇಕಿದ್ದು, ಈವ ರೆಗೆ 800 ಮಿ.ಮೀ ಆಗಿದೆ. ಶೇ 125 ರಷ್ಟು ಹೆಚ್ಚಳವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದರು.

ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿದೆ. ರೈತರಿಗೆ ಈಗಾಗಲೇ 1,200 ಕ್ವಿಂಟಲ್‌ ಬಿತ್ತನೆ ಭತ್ತದ ಬೀಜ ವಿತರಿಸಲಾಗಿದೆ. ಇದರಲ್ಲಿ 950 ಕ್ವಿಂಟಲ್‌ ತುಂಗಾ ಭಿತ್ತದ ಬೀಜ ಸೇರಿದೆ ಎಂದು ತಿಳಿಸಿದರು.

ಉಳಿದಂತೆ ಬಿಆರ್‌2655, ತನು ಐಆರ್ 64 ಸೇರಿ ತೆ 1100 ಕ್ವಿಂಟಲ್‌ ದಾಸ್ತಾನಿದೆ. ಸಹಕಾರಿ ಸಂಘ, ಖಾಸಗಿ ಸಂಸ್ಥೆಗಳು ಸೇರಿ ಸುಮಾರು 2 ಸಾವಿರ ಮೆಟ್ರಿಕ್‍ ಟನ್‍ ಗೊಬ್ಬರ ದಾಸ್ತಾನಿದೆ ಎಂದು ವಿವರಿಸಿದರು.

ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ತಹಶೀಲ್ದಾರ್ ನಾಗಭೂಷಣ್‍, ತಾಲ್ಲೂಕು ಪಂಚಾಯಿತಿ ಇಒ ಡಾ. ಬಿ.ಆರ್‌. ಪುನೀತ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.