ADVERTISEMENT

ಮುಕ್ತ ವಿವಿ: ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:05 IST
Last Updated 12 ಮಾರ್ಚ್ 2014, 6:05 IST

ಹಾಸನ: ‘ಆದಾಯ ತೆರಿಗೆ ರಿಯಾಯಿತಿ ಪಡೆಯುವ ಉದ್ದೇಶದಿಂದಲೇ ಅನೇಕ ಸಂಸ್ಥೆಗಳು ‘ಸಾಮಾಜಿಕ ಜವಾಬ್ದಾರಿ’ಯ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಸರಿಯಾಗಿ ಜಾರಿ ಮಾಡದೆ ಮೋಸ ಮಾಡುತ್ತಿವೆ’ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಂ.ವಿ. ಕೃಷ್ಣನ್ ಆರೋಪಿಸಿದರು.

ಹಾಸನದ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿರುವ ಹಿಮ್ಮತ್‌ಸಿಂಗ್‌ಕ ಉದ್ದಿಮೆಯ ಎಫ್‌ಇಪಿ (ಮುಂದುವರಿಕೆ ಶಿಕ್ಷಣ ಕಾರ್ಯಕ್ರಮ) ಯೋಜನೆಯಡಿ ಮುಕ್ತ ವಿ.ವಿ.ಯಿಂದ ಪದವಿ ಪಡೆದ ಸಿಬ್ಬಂದಿಗೆ ಸೋಮವಾರ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಹಿರಿಯ ಕಾರ್ಪೊರೇಟ್ ಸಂಸ್ಥೆಗಳು ಕೆಲವು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇಂಥ ಸೇವೆಗೆ ಅವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ಅನೇಕ ಸಂಸ್ಥೆಗಳು ಪ್ರಾಮಾಣಿಕವಾಗಿ ಈ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಹಿಮ್ಮತ್‌ಸಿಂಗ್‌ಕ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಹಿಮ್ಮತ್‌ಸಿಂಗ್‌ಕ ಸಂಸ್ಥೆಯ ನೂರಾರು ಉದ್ಯೋಗಿಗಳು ಮುಕ್ತ ವಿ.ವಿ.ಯಿಂದ ಪದವಿ ಪಡೆಯುತ್ತಿದ್ದಾರೆ. ತಾವೇ ದುಡಿದು ಸಂಪಾದನೆ ಮಾಡುವುದರ ಜೊತೆಗೆ ಶಿಕ್ಷಣವನ್ನೂ ಮುಂದುವರಿಸುತ್ತಿರುವುದು ಹೆಮ್ಮೆಯ ವಿಚಾರ.  ಈ ಸಂಸ್ಥೆ ಅಧಿಕಾರಿಗಳು ಮುಕ್ತ ವಿಶ್ವವಿದ್ಯಾಲಯದಿಂದ ಸ್ಟಡಿ ಸೆಂಟರ್ ಕೇಳಲು ಬಂದಿದ್ದರು. ಆದರೆ ಆದಕ್ಕಿಂತಲೂ ಹೆಚ್ಚಿನ ಸೌಲಭ್ಯ ನೀಡಲು ನಾನು ಬದ್ಧನಾಗಿದ್ದೇನೆ. ಎಂದು ಡಾ.ಕೃಷ್ಣನ್ ಅವರು ಹೇಳಿದರು.

ಸಂಸ್ಥೆಯ ಕೇಂದ್ರೀಯ ಮಾನವ ಸಂಪನ್ಮೂಲ ವಿಭಾಗದ ಅಧ್ಯಕ್ಷ ವೈ.ಆರ್. ವಿಲ್ಸನ್, ‘ನಮ್ಮ ಸಂಸ್ಥೆಯಲ್ಲಿ ಕಾರ್ಮಿಕರು, ಆಡಳಿತ ವರ್ಗದ ಸಿಬ್ಬಂದಿ ಎಲ್ಲರಿಗೂ ಸಮಾನ ಗೌರವ ದೊರೆಯುತ್ತಿದೆ. ಶಿಕ್ಷಣ ವಂಚಿತ ಮತ್ತು ಕಲಿಯಲು ಆಸಕ್ತಿಯಿರುವ ಕಾರ್ಮಿಕರಿಗೆ ಕಲಿಗೂ ಅವಕಾಶ ನೀಡುತ್ತಾ ಬಂದಿದ್ದು, ಅದರ ಫಲವಾಗಿ ಈಗ 220 ಮಹಿಳೆಯರು ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಕಲಿತು ಪದವೀಧರರಾಗಿದ್ದಾರೆ. ಮಾತ್ರವಲ್ಲದೆ ಇನ್ನೂ 443 ಮಹಿಳೆಯರು ಅಧ್ಯಯನ ಮಾಡುತ್ತಿದ್ದಾರೆ’ ಎಂದರು.

ಸಂಸ್ಥೆಯ ಉತ್ಪಾದನೆ ಮತ್ತು ಕಾರ್ಯಾಚರಣೆ ವಿಭಾಗದ ಅಧ್ಯಕ್ಷ ವಿ.ವಾಸುದೇವನ್, ಉಪಾಧ್ಯಕ್ಷ ಎಸ್.ಷಣ್ಮುಗಸುಂದರಂ, ಕರ್ನಾಟಕ ಮುಕ್ತ ವಿ.ವಿ. ಪ್ರಾಂತೀಯ ನಿರ್ದೇಶಕ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು. ಪದವಿ ಪಡೆದ ಕಾರ್ಮಿಕರು ಚಂದ್ರಕಲಾ, ಶ್ವೇತಾ ಮುಂತಾದವರು ಮತ್ತಿತರರು ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.