ADVERTISEMENT

ರಾಗಿ ಬೆಳೆ ರೈತರ ಕೈಸೇರುವುದು ಕಷ್ಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 9:00 IST
Last Updated 5 ಡಿಸೆಂಬರ್ 2017, 9:00 IST
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಯರೇಹಳ್ಳಿ ಗ್ರಾಮದ ಹೊಲವೊಂದರಲ್ಲಿ ಕೊಯ್ಲು ಮಾಡಿರುವ ರಾಗಿ ಬೆಳೆ ನೆನೆದಿದೆ
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಯರೇಹಳ್ಳಿ ಗ್ರಾಮದ ಹೊಲವೊಂದರಲ್ಲಿ ಕೊಯ್ಲು ಮಾಡಿರುವ ರಾಗಿ ಬೆಳೆ ನೆನೆದಿದೆ   

ಅರಸೀಕೆರೆ: ಒಖಿ ಚಂಡಮಾರುತದ ಪ್ರಭಾವದಿಂದಾಗಿ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದ್ದು ಕೊಯ್ಲ ಮಾಡಿರುವ ರಾಗಿ, ಸಾವೆ, ಜೋಳ ಮುಂತಾದ ಬೆಳೆಗಳು ಹಾಳಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ನಾಲ್ಕು ವರ್ಷಗಳ ಬರಗಾಲದಿಂದ ತೀವ್ರ ಕಂಗೆಟ್ಟಿದ್ದ ತಾಲ್ಲೂಕಿನಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ಸುಮಾರು 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಈ ಬಾರಿಯಾದರೂ ಬೆಳೆ ರೈತರ ಕೈ ಸೇರುತ್ತದೆ ಎಂಬ ನಿರೀಕ್ಷೆ ಮೂಡಿತ್ತು.

ಆದರೆ ಐದಾರು ದಿನಗಳಿಂದ ಒಖಿ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಇದ್ದು ಹಾಗೂ ಆಗಾಗ ಸೋನೆ ಮಳೆ ಆಗುತ್ತಿದೆ. ಈಗಾಗಲೇ ಕೊಯ್ಲು ಮಾಡಿರುವ ರಾಗಿ ಬೆಳೆ ನೆಲದ ಮೇಲೆ ಬಿದ್ದು ಭೂಮಿಯ ತೇವಾಂಶಕ್ಕೆ ಮೊಳಕೆಯೊಡೆದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತಾಗಿದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ADVERTISEMENT

ಬೆಳೆ ಕಾಪಾಡಿಕೊಳ್ಳಲು ರೈತರ ಪರದಾಟ: ರೈತರು ಹೊಲಗಳಲ್ಲಿ ರಾಗಿ ಬೆಳೆ ಉಳಿಸಿಕೊಳ್ಳಲು ಆನೇಕ ರೀತಿಯ ಯತ್ನ ಮಾಡುತ್ತಿದ್ದಾರೆ. ಭಾನುವಾರ ಮಳೆ ಬಿಡುವು ನೀಡಿದ್ದರಿಂದ ರೈತರು ಅವಸರದಿಂದ ಕಂತೆ ಕಟ್ಟಿ ಹೊಲದಲ್ಲಿಯೇ ಮೆದೆ ಮಾಡಿ ಬಣವೆ ಒಟ್ಟುತ್ತಿದ್ದ ದೃಶ್ಯ ಹಳ್ಳಿಗಳಲ್ಲಿ ಕಂಡು ಬಂದಿತು.

ಆದರೆ ಸೋಮವಾರ ಬೆಳಿಗ್ಗೆಯಿಂದಲೇ ಮತ್ತೆ ಮೋಡ ಕವಿದ ವಾತಾವರಣವಿದ್ದು ‘ಮಳೆ ಬರದೇ ಇದ್ದರೂ ಸಂಕಷ್ಟ, ಬಂದರೂ ನಷ್ಟ ಎಂಬಂತಾಗಿದೆ’ ಎಂದು ರೈತರಾದ ಈಶ್ವರಪ್ಪ, ರುದ್ರಪ್ಪ ನೋವು ತೋಡಿಕೊಂಡರು.

* * 

₹ 25 ಸಾವಿರ ಖರ್ಚು ಮಾಡಿ ತೆಗೆದ ಬೆಳೆ ಈಗ ಸೋನೆ ಮಳೆಯಿಂದಾಗಿ ಹಾಳಾಗುತ್ತಿದೆ
ರುದ್ರೇಗೌಡ, ರೈತ, ಗಂಡಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.