ADVERTISEMENT

ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ

ಜಿಲ್ಲಾ ನ್ಯಾಯಾಧೀಶರ ಸಂವೇದನಾ ಕಾರ್ಯಕ್ರಮದಲ್ಲಿ ಎನ್‌. ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2014, 7:00 IST
Last Updated 9 ಫೆಬ್ರುವರಿ 2014, 7:00 IST
ಹಾಸನದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರಿಗೆ  ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮವನ್ನು ಹೈಕೋರ್ಟ್‌ ನ್ಯಾಯಮೂರ್ತಿ  ಎನ್‌. ಕುಮಾರ್‌ ಉದ್ಘಾಟಿಸಿದರು
ಹಾಸನದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರಿಗೆ ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಎನ್‌. ಕುಮಾರ್‌ ಉದ್ಘಾಟಿಸಿದರು   

ಹಾಸನ: ‘ಭ್ರಷ್ಟಾಚಾರ, ಕೊಲೆ ಮಾಡುವವರನ್ನು ನಮ್ಮ ಸಮಾಜ ಗೌರವಿಸುತ್ತಿದೆ. ಆದರೆ, ನಾನಾ ಕಾರಣಗಳಿಂದ ವೇಶ್ಯಾವಾಟಿಕೆ ಮಾಡುವ ಮಹಿಳೆಯನ್ನು ಅಪರಾಧಿಗಳಂತೆ ಈ ಸಮಾಜ ನಿರ್ಲಕ್ಷಿಸಿಸುತ್ತಿದೆ’ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎನ್‌. ಕುಮಾರ್‌ ಹೇಳಿದರು. 

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ವತಿಯಿಂದ ‘ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ – ಕಾನೂನು ಮತ್ತು ಸಾಮಾಜಿಕ ದೃಷ್ಟಿಕೋನಗಳು’ ಎಂಬ ವಿಷಯದ ಕುರಿತು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರಿಗೆ  ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


‘ದೇಶದಲ್ಲಿ ಇಂದು ಮಹಿಳೆಗೆ ಸಮಾನ ಸ್ಥಾನಮಾನಕ್ಕಾಗಿ ಹೋರಾಟ ನಡೆಯುತ್ತಿದೆ. ಮಹಿಳೆಯರ ಮತ ಪಡೆದುಕೊಳ್ಳುವ ಉದ್ದೇಶದಿಂದ ಎಲ್ಲಾ ರಾಜಕೀಯ ಪಕ್ಷಗಳು ಇಂದು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಬೇಕೆಂದು ರಾಜಕೀಯ ಲಾಭಕ್ಕಾಗಿ ಒತ್ತಾಯಿಸುತ್ತಿವೆ.


ಆದರೆ, ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಮಹಿಳೆಯರನ್ನು ಜಾಗೃತರನ್ನಾಗಿ ಮಾಡಬೇಕಾದ ಅವಶ್ಯಕತೆ ಇದ್ದು, ಸಮಾಜದಲ್ಲಿ ಶೇ 90 ರಷ್ಟು ಮಹಿಳೆಯರು ಇನ್ನೂ ಅವಿದ್ಯಾವಂತರಾಗಿ ಹಾಗೂ ಬಡತನದಿಂದ ಜೀವನ ನಡೆಸುತ್ತಿದ್ದಾರೆ. ಈ ಎರಡು ಕಾರಣಗಳಿಂದ ಹಾಗೂ ಸುಲಭ ಹಣ ಸಂಪಾದನೆಗಾಗಿ ಮಹಿಳೆಯರು ಇಂದು ವೇಶ್ಯಾವಾಟಿಕೆ ಆರಿಸಿಕೊಳ್ಳುತ್ತಿದ್ದು, ಇನ್ನೊಂದೆಡೆ ಪುರುಷ ಸಮಾಜ ಮಹಿಳೆಯಿಂದ ಹಣ ಗಳಿಕೆ ಮಾಡುವ ಸಲುವಾಗಿ ಈ ವೃತ್ತಿಗೆ ಬಲವಂತವಾಗಿ ದೂಡುವ ಮೂಲಕ ಹಣ ಸಂಪಾದಿಸಿಕೊಳ್ಳುತ್ತಿದೆ.

ADVERTISEMENT

ವೇಶ್ಯಾವಾಟಿಕೆ ಮಾಡುವವರನ್ನು ಇಂದು ನಾವು ಅಪರಾಧಿಗಳೆಂಬ ಭಾವನೆಯಿಂದ ಹಾಗೂ ನಿರ್ಲಕ್ಷ್ಯ ಭಾವನೆಯಿಂದ ನೋಡಲಾಗುತ್ತಿದೆ. ಆದರೆ, ಈ ವೃತ್ತಿಗೆ ಮಹಿಳೆ ಬರಲು ಕಾರಣರಾದವರನ್ನು ಮೊದಲು ಶಿಕ್ಷಿಸಬೇಕು’ ಎಂದರು.


ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ನಿರ್ದೇಶಕ ಎಚ್‌.ಎಸ್‌. ಅಶೋಕಾನಂದ್‌ ಮಾತನಾಡಿ, ‘ಮಹಿಳೆಯರ ಸಮಸ್ಯೆಯ ಬಗ್ಗೆ ನೈತಿಕ ನೆಲಗಟ್ಟಿನ ಮೇಲೆ ಯೋಚನೆ ಮಾಡಬೇಕು. ಬಡತನ, ಶಿಕ್ಷಣದ ಕೊರತೆಯಿಂದಾಗಿ ದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರು ದಿನ ನಿತ್ಯ ಹೆಚ್ಚಾಗುತ್ತಿದ್ದಾರೆ.

ಸಮಾಜ ಆರಂಭವಾದ ಯುಗದಿಂದ ಲೈಂಗಿಕ ಕ್ರಿಯೆಗಾಗಿ ಪುರುಷ ಸಮುದಾಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇದರಿಂದ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಜೀವನ ನಡೆಸಬೇಕಾಗಿದೆ’ ಎಂದು ನುಡಿದರು.


ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕ ಮೋಹನ್‌ ಶ್ರೀಪಾದ ಸಂಕೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಎಚ್‌.ಎನ್‌. ಕಮಲ, ಜಿ.ಪಂ. ಸಿ.ಇ.ಓ. ಯು.ಪಿ. ಸಿಂಗ್‌, ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌. ಗೋಪಾಲಕೃಷ್ಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜೆ.ಕೆ. ರಶ್ಮಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜೇಗೌಡ, ಹಾಸನ ಉಪ ವಿಭಾಗಾಧಿಕಾರಿ ಶರತ್‌, ತಹಶೀಲ್ದಾರ್‌ ಮಂಜುನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.