ADVERTISEMENT

ರಾಜೀನಾಮೆಗೆ ಮುಂದಾಗಿದ್ದೆ: ದೇವೇಗೌಡ

ಸಂಖ್ಯಾ ಬಲದ ಮೇಲೆ ಸಂಸತ್‌ನಲ್ಲಿ ಮಾತಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:19 IST
Last Updated 3 ಸೆಪ್ಟೆಂಬರ್ 2013, 6:19 IST

ಹೊಳೆನರಸೀಪುರ: `ಸಂಸತ್ತಿನಲ್ಲಿ ಸಂಖ್ಯಾ ಬಲದ ಆಧಾರದಲ್ಲಿ ಮಾತನಾಡಲು ಅವಕಾಶ ನೀಡುವುದರಿಂದ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲು ಆಗುತ್ತಿಲ್ಲ. ಇದರಿಂದ ಬೇಸರಗೊಂಡು ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದೆ' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನುಡಿದರು.

ಸೋಮವಾರ ಹೊಳೆನರಸೀಪುರಕ್ಕೆ ಬಂದಿದ್ದ ಅವರು ಪತ್ರಕರ್ತರೊಡನೆ ಮಾತನಾಡಿದರು. `ಸಂಖ್ಯಾ ಬಲದ ಆಧಾರದಲ್ಲಿ 13-14 ಜನರ ಬಳಿಕ ಮಾತನಾಡಲು ಅವಕಾಶ ನೀಡುತ್ತಾರೆ. ಅದೂ ಗರಿಷ್ಠ ಮೂರು ನಿಮಿಷ ಮಾತ್ರ. ಇಷ್ಟು ಮಾತನಾಡಲು ಗಂಟೆಗಟ್ಟಲೆ ಕಾಯಬೇಕು. ಹೆಚ್ಚು ವಿಚಾರಗಳನ್ನು ಹೇಳಬೇಕಿದ್ದರೆ ಬರೆದು ಕೊಡಿ ದಾಖಲು ಮಾಡುತ್ತೇವೆ ಎನ್ನುತ್ತಾರೆ. ಇದರ ಹೊರತಾಗಿಯೂ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಎಲ್ಲ ಪ್ರಯತ್ನ ಮಾಡಿದ್ದೇನೆ ಎಂದರು.

ಕೇಂದ್ರ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದೇವೇಗೌಡ, `ಕೇಂದ್ರ ಸರ್ಕಾರ ಜನಪ್ರಿಯತೆ ಕಳೆದುಕೊಂಡ ಕಾರಣ ಆಹಾರ ಭದ್ರತೆಯಂಥ ಕಾಯ್ದೆಯನ್ನು ಜಾರಿ ಮಾಡುವುದು ಅನಿವಾರ್ಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅದರಲ್ಲಿ ಶೇ 80ಕ್ಕೂ ಹೆಚ್ಚು ಹಣ ಪೋಲಾಗಿದೆ ಎಂದರು.

ಪ್ರಧಾನಿ ಮನಮೋಹನ ಸಿಂಗ್ ವಿರುದ್ಧ ನರೇಂದ್ರ ಮೋದಿ ಅಸಾಂವಿಧಾನಿಕ ಪದ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತ, `ಮೋದಿಗೆ ಸ್ವಂತ ಶಕ್ತಿ ಇದ್ದರೆ ಪ್ರಧಾನಿಯಾಗಿ ಆಯ್ಕೆಯಾಗಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ.

ಮಾಜಿ ಪ್ರಧಾನಿ ವಾಜಪೇಯಿ ಅವರೂ ಯಾರೇ ಆದರೂ ಪ್ರಧಾನಿ ಹುದ್ದೆಯ ಬಗ್ಗೆ ಲಘುವಾದ ಹೇಳಿಕೆ ನೀಡುವುದನ್ನು ಸಹಿಸುತ್ತಿರಲಿಲ್ಲ. ಅಂಥ ಪಕ್ಷದಲ್ಲಿರುವ ಮೋದಿ ತನ್ನ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, `ಪಕ್ಷದ ಕೋರ್ ಕಮಿಟಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು' ಎಂದರು.

`ಬೇಸರ ತಂದ ಲೇಖನ'
ಹಾಸನ: `ಒಂದು ಪತ್ರಿಕೆ ನನ್ನ ವಿರುದ್ಧ ಬರೆದಿರುವ ಲೇಖನ ನನಗೆ ಅತ್ಯಂತ ಬೇಸರ ತಂದಿದೆ. ಇನ್ನು ಮುಂದೆ ಮಾಧ್ಯಮದ ಮುಂದೆ ಬಾರದಿರಲು ತೀರ್ಮಾನಿಸಿದ್ದೇನೆ' ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ನನ್ನ ಮತ್ತು ಪಕ್ಷವನ್ನು ಅನೇಕ ಪತ್ರಿಕೆಗಳು ಟೀಕೆ ಮಾಡಿವೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಪತ್ರಿಕೆಗಳು ಬರೆದ ಪರಿಣಾಮ ನಾವು ಈಚಿನ ಉಪಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು. ಆ ಬಗ್ಗೆ ಬೇಸರವಿಲ್ಲ ಎಂದರು.

ಟೀಕಿಸುವಾಗ ಬಳಸುವ ಪದಗಳು ನೋವು ಮಾಡುವಂತಿರಬಾರದು. ಈಚೆಗೆ ಒಂದು ಪತ್ರಿಕೆಯಲ್ಲಿ ಬಳಸಿದ ಪದಗಳು ಅತ್ಯಂತ ನೋವು ತಂದಿದ್ದು, ಇನ್ನು ಮುಂದೆ ಎಂದೂ ಪತ್ರಿಕೆಗಳ ಮುಂದೆ ಬರಬಾರದು ಎಂದು ತೀರ್ಮಾನಿಸಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.