ADVERTISEMENT

ರುದ್ರಪಟ್ಟಣಕ್ಕೆ ಮತ್ತೂರರ ಕನವರಿಕೆ

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2011, 5:10 IST
Last Updated 9 ಅಕ್ಟೋಬರ್ 2011, 5:10 IST

ರಾಮನಾಥಪುರ: ಕಳೆದ ಗುರುವಾರ ನಿಧನ ಹೊಂದಿದ ವಿದ್ವಾಂಸ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ರುದ್ರಪಟ್ಟಣ ಗ್ರಾಮ ಕಂಬನಿ ಮಿಡಿದಿದೆ.

ಗಮಕ ವ್ಯಾಖ್ಯಾನದ ಮೂಲಕ ಸಂಗೀತಾಭಿಮಾನಿಗಳ ಗಮನ ಸೆಳೆದಿದ್ದ ಮತ್ತೂರು ಕೃಷ್ಣಮೂರ್ತಿ ಅವರು ಇಲ್ಲಿನ ಸಂಗೀತ ಗ್ರಾಮ ರುದ್ರಪಟ್ಟಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಕಳೆದ     ಮಾರ್ಚ್‌ನಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಡಾ. ಮತ್ತೂರು ಅವರು ತಮ್ಮ ಸ್ನೇಹಿತ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ಅವರೊಂದಿಗೆ `ಗಮಕ ಸೌರಭ~ ಕಾರ್ಯಕ್ರಮ ನೀಡಿದ್ದನ್ನು ಸ್ಥಳೀಯರು ಇಂದಿಗೂ ಸ್ಮರಿಸುತ್ತಾರೆ.

`ಮಹಾಭಾರತ ಗ್ರಂಥದಲ್ಲಿ ಶಿವ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಕಥಾ ಭಾಗವನ್ನು ಅರ್ಥಪೂರ್ಣವಾಗಿ ವಾಚಿಸಿ ಜನರನ್ನು ಮಂತ್ರ ಮುಗ್ದರನ್ನಾಗಿಸಿದ್ದರು.

ಕೃಷ್ಣಮೂರ್ತಿ ಅವರ ಈ ಕಾರ್ಯಕ್ರಮವನ್ನು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಈಚೆಗೆ ಪುನಃ ನೆನಪಿಸಿಕೊಂಡರು.

`ರುದ್ರಪಟ್ಟಣ ಗ್ರಾಮಕ್ಕೆ ಭೇಟಿ ನೀಡಿದ್ದ ಮತ್ತೂರು ಅವರು ಇಲ್ಲಿನ ಮಣ್ಣನ್ನು ಸ್ಪರ್ಶಿಸಿ ತಲೆ ಮೇಲಿಟ್ಟು ನಮಿಸಿದ್ದರು. ಪ್ರತಿ ವರ್ಷ ರುದ್ರಪಟ್ಟಣದಲ್ಲಿ ನಡೆಯುವ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು~ ಎಂದು ಪದ್ಮನಾಭ ಸ್ಮರಿಸಿದರು.

ಎಲ್ಲವೂ ಸರಿಯಾಗಿದ್ದರೆ ಮುಂದೆ ಗ್ರಾಮದಲ್ಲಿ ನಡೆಯಲಿರುವ ಸಂಗೀತೋತ್ಸವ ಕಾರ್ಯಕ್ರಮಗಳಲ್ಲಿ ಡಾ. ಮತ್ತೂರು ಕೃಷ್ಣಮೂರ್ತಿ ಅವರ ಅದ್ಭುತವಾದ ಗಮಕ ಸಿರಿಯನ್ನು ಇಲ್ಲಿನ ಸಂಗೀತಾಭಿಮಾನಿಗಳು ಸವಿಯಬೇಕಾಗಿತ್ತು. ವಿದ್ವತ್ ಪ್ರವಚನಗಳು ಜನರಿಗೆ ತಲುಪಲು ಸಾಧ್ಯವಾಗುತ್ತಿತ್ತು. ಆದರೆ ಅವರ ಅಗಲಿಕೆ ಇದೆಲ್ಲವನ್ನೂ ಅಸಾಧ್ಯವಾಗಿಸಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಅವರು ಜಗತ್ತಿನಿಂದ ಕಣ್ಮರೆಯಾಗಿದ್ದರೂ ಅವರು ಬಿಟ್ಟು ಹೋಗಿರುವ ಸಂಗೀತ, ಸಾಹಿತ್ಯ, ಗಮಕ ಕಲೆ ಹಾಗೂ ಸಂಗೀತ ಗ್ರಾಮ ರುದ್ರಪಟ್ಟಣದ ಮೇಲೆ ಹೊಂದಿದ್ದ ಬಾಂಧವ್ಯವನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.