ADVERTISEMENT

ರೋಬೋಟ್ ತಯಾರಿಸಿದ ವಿದ್ಯಾರ್ಥಿ ಪಡೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 9:15 IST
Last Updated 18 ನವೆಂಬರ್ 2012, 9:15 IST

ಹಾಸನ: ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಎಲ್ಲ ವಿಭಾಗಗಳ (ಸಿವಿಲ್ ಎಂಜಿನಿಯರಿಂಗ್ ಬಿಟ್ಟು) ಸುಮಾರು 60 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹೊಸ ಅನುಭವ ಪಡೆದರು. ಮುಂಬೈ ಮೂಲದ ಟೆಕ್ನೊಫೀಲಿಯಾ ಸಂಸ್ಥೆ ಆಯೋಜಿಸಿದ್ದ `ಹಾಪ್ಟಿಕ್ ರೋಬೋ ಟಿಕ್ ಆಮ್~ ಕಾರ್ಯಾಗಾರದಲ್ಲಿ ಪಾಲ್ಗೊಂಡ ಈ ವಿದ್ಯಾರ್ಥಿಗಳು ಸ್ವತಃ ರೋಬೋಟ್‌ಗಳನ್ನು ತಯಾರಿಸಿದರು.

ಮುಂಬೈ ಮೂಲದ ಈ ಸಂಸ್ಥೆ ದೇಶಾದ್ಯಂತ ನೂರಕ್ಕೂ ಹೆಚ್ಚು ಕಾಲೇಜುಗಳಲ್ಲಿ ಈ ಕಾರ್ಯಾಗಾರ ಆಯೋಜಿಸಿ ವಿದ್ಯಾರ್ಥಿಗಳ ಕೌಶಲವನ್ನು ಪರೀಕ್ಷಿಸುತ್ತಿದೆ. ಮಲೆನಾಡು ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಹಾಗೂ ಶನಿವಾರಗಳಂದು ಈ ಕಾರ್ಯ ಕ್ರಮ ಆಯೋಜಿಸಲಾಯಿತು. ಇಲ್ಲಿಂದ ಆಯ್ಕೆಯಾಗುವ ಮೂರು ಉತ್ತಮ ತಂಡಗಳು ಫೆಬ್ರುವರಿ ತಿಂಗಳಲ್ಲಿ ಮುಂಬೈ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಅಲ್ಲಿಂದ ಮೂರು ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ.

ಎರಡು ದಿನಗಳ ಕಾರ್ಯಾಗಾರದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕೆಲವು ತಾಂತ್ರಿಕ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾಲೇಜಿನ ವಿವಿಧ ವಿಭಾಗಗಳ 60ಕ್ಕೂ ವಿದ್ಯಾರ್ಥಿಗಳನ್ನು ತಲಾ ನಾಲ್ಕು ಜನರ ತಂಡದಂತೆ ಒಟ್ಟು 15 ತಂಡಗಳನ್ನು ರಚಿಸಲಾಗಿದೆ. ಶನಿವಾರ ಬೆಳಿಗ್ಗೆ ಅವರ ಕೈಗೆ ಒಂದು ಮಿನಿ ಕಿಟ್ ಕೊಟ್ಟು ರೋಬೋಟ್ ತಯಾರಿಸುವಂತೆ ಸೂಚಿಸಲಾಯಿತು. ವಿದ್ಯಾರ್ಥಿಗಳೇ ತಮಗೆ ಮೊದಲೇ ನೀಡಿದ ಮಾಹಿತಿಯ ಪ್ರಕಾರ ರೋಬೋಟ್ ಜೋಡಿಸಬೇಕಾಗಿತ್ತು. ಬಳಿಕ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಿ ಅದಕ್ಕೆ ಚಲನೆ ನೀಡಬೇಕು.

ಪ್ರತಿ ರೊಬೋಟ್‌ಗೆ ಒಂದು ನಿರ್ದಿಷ್ಟ ಕೆಲಸ ಸೂಚಿಸಲಾಗಿತ್ತು. ಯಾವ ರೋಬೋಟ್ ಆ ಕೆಲಸವನ್ನು ಅತ್ಯಂತ  ಸಮರ್ಪಕವಾಗಿ, ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಮಾಡುವುದೋ ಆ ತಂಡದವರು ಮುಂದಿನ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ರೋಬೋಟ್‌ನ ಕಾರ್ಯ ನಿರ್ವಹಣೆ ಹಾಗೂ ಇತರ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.

`ಇದೊಂದು ಹೊಸ ಅನುಭವ. ನಮ್ಮ ವಿಭಾಗ, ದೈನಂದಿನ ಚಟುವಟಿಕೆಗಳ ಹೊರತಾಗಿ ಇಂಥ ಅವಕಾಶ ಲಭಿಸಿದ್ದು ಖುಷಿ ತಂದಿದೆ. ಈ ಯೋಜನೆಯ ಮೂಲಕ ನಮಗೆ ಹಲವು ಅವಕಾಶಗಳು ತೆರೆದುಕೊಂಡಂತಾಗಿದೆ. ಜಾಗತಿಕ ಮಟ್ಟದ ಒಂದು ಸಂಸ್ಥೆಯ ಜತೆಗೆ ಸಂಪರ್ಕ ಲಭಿಸಿರುವ ಖುಷಿ ಒಂದೆಡೆಯಾದರೆ, ಮುಂದೆ ನಮ್ಮಲ್ಲೇ ಕೆಲವರು ಈ ಸಂಸ್ಥೆಯ್ಲ್ಲಲಿ ಇಂಟರ್ನ್‌ಶಿಪ್  ಮಾಡುವ ಅವಕಾಶವನ್ನೂ ಪಡೆಯಬಹುದು.

ಸಂಶೋಧನೆ ಮಾಡಲು ಬಯಸುವವರು ಈ ಪ್ರಾಜೆಕ್ಟ್‌ನಲ್ಲೇ ಸಾಧನೆ ಮಾಡಬಹುದು. ಈ ಎಲ್ಲ ದೃಷ್ಟಿಯಿಂದ ಇದು ಉತ್ತಮ ಅವಕಾಶ~ ಎಂದು ಪಾಲ್ಗೊಂಡಿದ್ದ ಎಂ.ಟೆಕ್ ವಿದ್ಯಾರ್ಥಿಗಳಾದ ಚಂದನ್, ಪ್ರಶಾಂತ್, ನವೀನ್  ಹಾಗೂ ರೋಹನ್  ನುಡಿದರು.

ಶುಕ್ರವಾರ ಬೆಳಿಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆರ್. ಟಿ.ದ್ಯಾವೇಗೌಡ  ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ಕಾರ್ಯಾಗಾರದ ಬಗ್ಗೆ ಸಂಚಾಲಕ ಡಾ.ಎಂ.ಎಸ್.ಶ್ರೀನಾಥ್ ಮಾಹಿತಿ ನೀಡಿದರು.  ಪ್ರಾಚಾರ್ಯ ಡಾ.ಎಂ.ವಿ. ಸತ್ಯನಾರಾಯಣ, ಎಂ.ಟಿ.ಇ .ಎಸ್. ಖಜಾಂಚಿ ಆರ್.ಶೇಷಗಿರಿ ಮತ್ತಿತರರು ಭಾಗವಹಿಸಿದ್ದರು.

ಉಪ ಪ್ರಾಚಾರ್ಯ ಡಾ.ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಅಮೇರಿಕ ಟೆಕ್ನೋಫೀಲಿಯಾ ಸಂಸ್ಥೆಯ ತಂತ್ರಜ್ಞ ಭರತ್ ರೋಬೋಟ್ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.ವಿವಿಧ ಇಲಾಖೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.