ADVERTISEMENT

ಲಕ್ಷಾಂತರ ಮೌಲ್ಯದ ಔಷಧ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 9:55 IST
Last Updated 24 ಏಪ್ರಿಲ್ 2012, 9:55 IST

ಹಳೇಬೀಡು: ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷಧ, ಮಾತ್ರೆ ಹಾಗೂ ಚುಚ್ಚುಮದ್ದುಗಳನ್ನು ರಾಜನಶಿರಿ ಯೂರು ರಸ್ತೆಯ ಬಿದುರುಕೆರೆ ಹಾಗೂ ಏರಿ ಪಕ್ಕದ ರಸ್ತೆಗೆ ಸುರಿದು ಸುಟ್ಟು ಹಾಕಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಅಲೋಪತಿ ಔಷಧ ಮಾತ್ರಗಳಲ್ಲದೆ ಕೆಲವು ಕಾಗದ ಪತ್ರ ಹಾಗೂ ಬಿಲ್ ಪುಸ್ತಕ ಬೆಂಕಿಯಲ್ಲಿ ಅರೆಬರೆ ಸುಟ್ಟಿವೆ. ಕೆಲವು ಔಷಧ ಅವಧಿ ಮುಗಿದಿದ್ದರೆ, ಅವಧಿ ಮುಗಿಯದ ಔಷಧಗಳೂ ಇದರಲ್ಲಿ ಸೇರಿವೆ.
ಕೆರೆಯಲ್ಲಿ ಬಿದ್ದ ಔಷಧ ಸರ್ಕಾರ ದಿಂದ ಸರಬರಾಜು ಆಗಿಲ್ಲ. ಖಾಸಗಿ ಮಾರಾಟಗಾರರ ಔಷಧ ಇರಬಹುದು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ. ಕೆರೆ ಏರಿ ಪಕ್ಕದ ಕಸಕಡ್ಡಿ ರಾಶಿಗಳಲ್ಲಿ ಈಶ್ವರ್‌ಫಾರ್ಮ ಹಳೇಬೀಡು ಎಂಬ ಕೆಲವು ಬಿಲ್‌ಗಳು ಪತ್ತೆಯಾಗಿವೆ.

ರಮೇಶ್ ಎಂಬ ವ್ಯಕ್ತಿ ಸುಮಾರು ಆರು ತಿಂಗಳ ಹಿಂದೆ ಪಟ್ಟಣದ ದೇವಸ್ಥಾನ ರಸ್ತೆಯಲ್ಲಿ ಈಶ್ವರ್ ಫಾರ್ಮ್ ಹೆಸರಿನಿಂದ ಅಲೋಪತಿ ಔಷಧ ಸಗಟು ವ್ಯಾಪಾರ ನಡೆಸು ತ್ತಿದ್ದರು. 2-3 ವರ್ಷದಿಂದ ಉತ್ತಮ ವ್ಯವಹಾರ ನಡೆಸಿದ್ದರು.

ಕಳೆದ ಆರು ತಿಂಗಳಿನಿಂದ ಈ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ. ವಾಸದ ಮನೆ ಬಾಡಿಗೆ ನೀಡಿದವರು ಪುನಃ ಮನೆಗೆ ಹಿಂದಿರುಗಲಿಲ್ಲ ಎಂದು ಭಾವಿಸಿ ಔಷಧಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ.
ಇಂಜಕ್ಷನ್ ಟ್ಯೂಬ್, ಸೂಜಿಗಳು ರಾಶಿಯಲ್ಲಿ ಬಿದ್ದಿರುವುದರಿಂದ ಸುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮಳೆ ಬೀಳುತ್ತಿರುವುದರಿಂದ ಕೆರೆಯಲ್ಲಿ ಹಸಿರು ಹುಲ್ಲು ಬೆಳೆಯುತ್ತದೆ. ಜಾನುವಾರು ಮೇಯುವ ಸಂದರ್ಭದಲ್ಲಿ ಹುಲ್ಲಿನ ಜೊತೆಯಲ್ಲಿ ಮೂಕ ಪ್ರಾಣಿಗಳ ಹೊಟ್ಟಿಗೆ ಸೂಜಿ, ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಯ ಚೂರು ಸೇರಿಕೊಂಡರೆ ಸಾವು ನೋವಿನ ಘಟನೆ ಸಂಭವಿಸುತ್ತದೆ. ಕೆರೆಗೆ ನೀರು ತುಂಬಿಕೊಂಡು ಜಮೀನುಗಳಿಗೆ ಹರಿಸಿದರೂ ತೊಂದರೆಯಾಗುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.