ADVERTISEMENT

ಲಕ್ಷಾಂತರ ರೂಪಾಯಿ ಬೆಟ್ಟಿಂಗ್!

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 11:25 IST
Last Updated 3 ಜನವರಿ 2011, 11:25 IST

ಅರಸೀಕೆರೆ: ಮತ ಯಂತ್ರಗಳನ್ನು ಇಟ್ಟಿರುವ ಪಟ್ಟಣದ ಸಂತ ಮೇರಿಸ್ ಪ್ರೌಢಶಾಲೆ ಕಟ್ಟಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಚುನಾವಣಾಧಿಕಾರಿ ಎನ್.ಎಸ್. ಚಿದಾನಂದ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಟ್ಟಣದ ಸಂತ ಮೇರಿಸ್ ಶಾಲೆಯ ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ವಿದ್ಯುನ್ಮಾನ ಮತ ಯಂತ್ರಗಳನ್ನು ಶಾಲೆಯ ಕೊಠಡಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಒಬ್ಬರು ಸಬ್‌ಇನ್‌ಸ್ಪೆಕ್ಟರ್, ಪೊಲೀಸ್ ಪೇದೆಗಳು ಹಾಗೂ ಒಂದು ವ್ಯಾನ್ ಪೊಲೀಸ್ ತುಕಡಿಯೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಎಣಿಕೆ ಕೇಂದ್ರದಿಂದ 100 ಮೀ. ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಹೇಳಿದರು.

ಬೆಟ್ಟಿಂಗ್: ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸೋಲು- ಗೆಲುವಿನ ಚಿಂತೆಯಾದರೆ, ಇನ್ನು ಕೆಲವರು ಬೆಟ್ಟಿಂಗ್ ಮೂಲಕ ಹಣ ಸಂಪಾದನೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಹಾರನಹಳ್ಳಿ, ಕಣಕಟ್ಟೆ, ಅಗ್ಗುಂದ, ಗಂಡಸಿ, ಜಾವಗಲ್ ಹಾಗೂ ಬಾಗೇಶಪುರ ಜಿ.ಪಂ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಿನ ಬೆಟ್ಟಿಂಗ್ ಶ್ರೀಮಂತರಿಗೆ ಹಣ ಸಂಪಾದನೆಯ ಮಾರ್ಗವಾಗಿದೆ. ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ತಾಲ್ಲೂಕಿನ ಎಲ್ಲಾ ಜಿ.ಪಂ ಕ್ಷೇತ್ರಗಳು ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್ ಭಾನುವಾರ ತಿಳಿಸಿದರು. ತಾಲ್ಲೂಕಿನ ಕಣಕಟ್ಟೆ, ಅಗ್ಗುಂದ, ಬಾಣಾವರ, ಗಂಡಸಿ, ಬಾಗೇಶಪುರ, ಹಾರನಹಳ್ಳಿ ಹಾಗೂ ಜಾವಗಲ್ ಜಿ.ಪಂ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಅಲ್ಲದೆ ತಾಲ್ಲೂಕು ಪಂಚಾಯಿತಿಯಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.