ADVERTISEMENT

ವರುಣಾಗಿಲ್ಲ ಕರುಣೆ: ಸೂರ್ಯಕಾಂತಿಹೀನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 5:45 IST
Last Updated 22 ಅಕ್ಟೋಬರ್ 2011, 5:45 IST

ಬಾಣಾವರ: ಮಳೆ ಕೈ ಕೊಟ್ಟ ಪರಿಣಾಮ ಬಾಣಾವರ ಹೋಬಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ನೆಲ ಕಚ್ಚಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಪ್ರಾರಂಭದಲ್ಲಿ ಬಿದ್ದ ಉತ್ತಮ ಮಳೆಗೆ ಬಾಣಾವರ ಹೋಬಳಿಯಲ್ಲಿ ಅನೇಕ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.  ರೈತರಿಗೆ ವರುಣನ ಮುನಿಸಿನಿಂದ ಹಾಗೂ ಬೆಳೆದ ಅಲ್ಪ ಬೆಳೆ ರೋಗಗಳಿಗೆ ತುತ್ತಾದ್ದರಿಂದ ನಿರೀಕ್ಷಿತ ಫಸಲು ಬಾರದೆ ನಿರಾಶೆಯಾಗಿದೆ.

ಮುಸುಕಿನ ಜೋಳ 3 ತಿಂಗಳ ಬೆಳೆಯಾದ್ದರಿಂದ, ಮುಂಗಾರಿನಲ್ಲಿ ಬಿತ್ತನೆ ಮಾಡಿ ನಂತರ ರಾಗಿ ಬೆಳೆಯುವ ಯೋಚನೆಯಲ್ಲಿದ್ದ ರೈತರಿಗೆ ಈಗ ಯಾವ ಬೆಳೆಯು ಕೈಗೆ ಸಿಕ್ಕದೇ ಚಿಂತಾಕ್ರಾಂತರಾಗಿದ್ದಾರೆ.

ಈ ಭಾಗದಲ್ಲಿ ಮಳೆ ಸರಿಯಾಗಿ ಬಾರದಿರುವುದರಿಂದ ವ್ಯಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಎಳ್ಳು ಬೆಳೆಯಲು ಸಾಧ್ಯವಾಗಿಲ್ಲ. ರೈತರು ಮುಸುಕಿನ ಜೋಳ ಬೆಳೆಯಲು ಒಲವು ತೋರಿದ್ದರು. ನೂರಾರು ಎಕರೆಯಲ್ಲಿ ಬಿತ್ತನೆ ಸಹ ಮಾಡಿದ್ದರು.

ಜೋಳದ ತೆನೆ ಹೊರಟು ಬೀಜಗಳಲ್ಲಿ ಹಾಲು ತುಂಬಿ ಬಲಿಯುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ಅರೆಬರೆ ಬಂದ ಬೆಳೆಯು ರೈತರ ಕೈಗೆಟುಕದೇ ಗಗನ ಕುಸುಮವಾಗಿದೆ.

ಒಂದು ಎಕರೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿರುವ ಹೇಮಂತ ಕುಮಾರ್ 3-4 ವರ್ಷದಿಂದ ಇದೇ ಪರಿಸ್ಥಿತಿ ನಮ್ಮದಾಗಿದೆ. ಮುಸುಕಿನ ಜೋಳ ಬಿತ್ತನೆಗೆ ಮತ್ತು ಗೊಬ್ಬರಕ್ಕಾಗಿ ಸುಮಾರು 25 ಸಾವಿರ ಖರ್ಚು ಮಾಡಿ ಬೆಳೆ ಮಾಡಿದ್ದೇವು.

ಮಳೆ ಸರಿಯಾಗಿ ಬಾರದ ಪರಿಣಾಮ ಪೂರ್ತಿ 1 ಎಕರೆ ಒಣಗಿ ನಿಂತಿದೆ. ಈಗ ತೆನೆ ಮುರಿದು ಬೀಜ ಬಿಡಿಸಲು ಕೆಲಸದವರಿಗೆ ಕೊಡುವ ಹಣವು ಸಹ ಸಿಗುವುದಿಲ್ಲ. ಇದರಿಂದ ಯಾವುದೇ ಆದಾಯ ನಿರೀಕ್ಷಿಸುವಂತಿಲ್ಲ ಆದರೆ ಬೆಳೆಗಾಗಿ ಮಾಡಿದ ಸಾಲ ಹಾಗೆಯೇ ಉಳಿಯುತ್ತದೆ ಎಂದು ತಮ್ಮ ಸಂಕಟ ವ್ಯೆಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.