ಸಕಲೇಶಪುರ: ಪಶ್ಚಿಮಘಟ್ಟದ ಮಲೆನಾಡಲ್ಲಿ ಜೂನ್ ತಿಂಗಳ ಪೂರ್ತಿ ಧಾರಾಕಾರವಾಗಿ ಸುರಿಯಬೇಕಾಗಿದ್ದ ಮಳೆ ಈ ಬಾರಿ ಕೈಕೊಟ್ಟ ಕಾರಣ, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.
ವಾಡಿಕೆಯಂತೆ ರೇವತಿ ಮಳೆ ಮೇ ಎರಡನೇ ವಾರದಿಂದ ಶುರುವಾಗಿ, ಜೂನ್ ಕೊನೆಯ ವಾರದೊಳಗೆ ಸಾರಾಸರಿ 600 ಮಿ.ಮೀ. ಮಳೆಯಾಗಬೇಕು. 2011ರ ಮುಂಗಾರು ಹಂಗಾಮಿನಲ್ಲಿ ಜೂನ್ 30ಕ್ಕೆ ಸರಾಸರಿ 480 ಮಿ.ಮೀ. ಮಳೆಯಾಗಿತ್ತು. ಜೂನ್ 7ರಿಂದ ಒಂದು ದಿನವೂ ಬಿಡುವು ನೀಡದಂತೆ ಮಳೆ ಸುರಿದಿತ್ತು. ಆದರೆ ಪ್ರಸಕ್ತ ಹಂಗಾಮಿನ ಮೇ ಕೊನೆಯ ವಾರ ಹಾಗೂ ಜೂನ್ ತಿಂಗಳಲ್ಲಿ ಮಳೆ ಗಣನೀಯವಾಗಿ ಕಡಿಮೆಯಾಗಿದೆ.
ಏಪ್ರಿಲ್‌ನಲ್ಲಿ ವಾಡಿಕೆಯಂತೆ 66 ಮಿ.ಮೀ. ಆಗಬೇಕು, ಆದರೆ ಈ ಬಾರಿ 203 ಮಿ.ಮೀ. ಅಂದರೆ ಅಧಿಕ ಮಳೆಯಾಗಿದೆ. ಮೇ ತಿಂಗಳಲ್ಲಿ ಶೇ.88 ರಷ್ಟು ಹಾಗೂ ಜೂನ್‌ನಲ್ಲಿ ಶೇ. 15ರಷ್ಟು ಮಳೆಯ ಕೊರತೆ ಉಂಟಾಗಿದೆ. ಮೇ ಕೊನೆಯ ವಾರದಿಂದ ಜೂನ್ ಎರಡನೆ ವಾರದ ವರೆಗೆ ಮಳೆಯ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಭತ್ತದ ನಾಟಿ ಕಾರ್ಯದಲ್ಲಿ ಒಂದು ತಿಂಗಳ ಹಿನ್ನಡೆ ಉಂಟಾಗಿದೆ.
ಮಲೆನಾಡು ಪರಿಸರದಲ್ಲಿ ಜೂನ್ ಕೊನೆಯ ವಾರದ ಹೊತ್ತಿಗೆ ಸರಿ ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಮುಗಿದು, ಜುಲೈ ಮೊದಲ ವಾರದಲ್ಲಿ ನಾಟಿ ಚುರುಕಾಗಿ ನಡೆಯಬೇಕು. ಆದರೆ ಈ ಬಾರಿ ಜೂನ್ ಅಂತ್ಯಕ್ಕೆ ನೀರಾವರಿ ವ್ಯವಸ್ಥೆ ಇರುವ ರೈತರು ಸೇರಿದಂತೆ ಕೇವಲ 120 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಮಾಡಲಾಗಿದೆ. ಅದರಲ್ಲಿ ಯಂತ್ರದ ಮೂಲಕ ನಾಟಿ ಮಾಡಿರುವುದೇ ಹೆಚ್ಚಾಗಿರುವುದು ಗಮನಾರ್ಹ.
ತಾಲ್ಲೂಕಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 1550 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ 1315 ಕ್ವಿಂಟಾಲ್ ಬಿತ್ತನೆ ಬೀಜವನ್ನು 2615 ಮಂದಿ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ.
ಜೂನ್ 20ರ ನಂತರ ಬಿದ್ದ ಮಳೆಯಿಂದಾಗಿ ರೈತರು ಭೂಮಿ ಸಿದ್ದತೆ, ಸಸಿ ಮಡಿ ಮಾಡುವ ಕೃಷಿ ಚಟುವಟಿಕೆಯನ್ನು ಚುರುಕು ಗೊಳಿಸಿದ್ದಾರೆ ಎಂದು ಸಹಕಾಯ ಕೃಷಿ ನಿರ್ದೇಶಕ ಜಿ.ಎಚ್. ಯೋಗೇಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.