ADVERTISEMENT

ವಸ್ತುಪ್ರದರ್ಶನ: ವಿದ್ಯಾರ್ಥಿಗಳ ಕೌಶಲ ಅನಾವರಣ

ಜಾನೆಕೆರೆ ಆರ್‌.ಪರಮೇಶ್‌
Published 22 ಡಿಸೆಂಬರ್ 2012, 5:52 IST
Last Updated 22 ಡಿಸೆಂಬರ್ 2012, 5:52 IST

ಸಕಲೇಶಪುರ: ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಳುಹಿಸುತ್ತಿರುವ ಪಟ್ಟಣದ ರೋಟರಿ ಆಂಗ್ಲ ಶಾಲೆಯಲ್ಲಿ, ಕಳೆದ ಮಂಗಳವಾರ ವಿದ್ಯಾರ್ಥಿಗಳು ಪ್ರದರ್ಶಿಸಿದ ವಸ್ತು ಪ್ರದರ್ಶನ ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಪೋಷಕರ ಪ್ರಶಂಸೆಗೆ ಪಾತ್ರವಾಯಿತು.

ವರ್ಷಪೂರ್ತಿ ಪಠ್ಯದಿಂದ ಕಲಿತ ಶಿಕ್ಷಣವನ್ನು, ತಮ್ಮದೇ ಶೈಲಿಯಲ್ಲಿ ಸಾಮಾನ್ಯ ಜ್ಞಾನ ಬಳಿಸಿ, ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದರಿಗಳು ಅರ್ಥಪೂರ್ಣವಾಗಿದ್ದವು. ವಿಜ್ಞಾನ ವಿಷಯದ ವಸ್ತುಪ್ರದರ್ಶನದಲ್ಲಿ ಮನೆ ಕೆಲಸಕ್ಕೆ ಯಂತ್ರ ಮಾನವ (ರೋಬೋಟ್) ಬಳಕೆಯನ್ನು ವಿದ್ಯುತ್ ಶಕ್ತಿಯ ಬಳಕೆ ಇಲ್ಲದೆ, ಸಿರಂಜ್‌ಗಳಲ್ಲಿ ನೀರು ಹಾಗೂ ಹೈಡ್ರಾಲಿಕ್ ವಿಧಾನ ಬಳಸಿ ಮಾಡಲಾಗಿತ್ತು.

ನೀರಿನ ಶಕ್ತಿ ಬಳಸಿ ಜೆಸಿಬಿ ಮಾಡೆಲ್,ಸೋಲಾರ್ ಮಾಡೆಲ್, ಅಕ್ವೇರಿಯಂ, ಮೋಟರ್‌ಗಳನ್ನು ಅಳವಡಿಸಿ ಮಾಡಲಾಗಿದ್ದ ಮೆಟಲ್ ಡಿಟೆಕ್ಟರ್‌ಗಳು ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದವು.

ಹೃದಯ ಬಡಿತದ ಮಾಡೆಲ್, ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ವಿಧಾನ, ಟೆಲಿಸ್ಕೋಪ್, ಕುತುಬ್ ಮಿನಾರ್, ಮನೆಯಲ್ಲಿಯೇ ಬಳಕೆ ಮಾಡುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿಜ್ಞಾನ, ಗಣಿತ, ಸಮಾಜ ಶಾಸ್ತ್ರದ ಮಾದರಿಗಳು ಅನಕ್ಷರಸ್ಥರಿಗೂ ಶಿಕ್ಷಣ ನೀಡುವಂತೆ ಅರ್ಥಪೂರ್ಣ ಹಾಗೂ ಆಕರ್ಷಣೀಯವಾಗಿದ್ದವು.

ಇದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಧ್ರುವಕುಮಾರ್ ಪ್ರತಿಭಾ ಕಾರಂಜಿ ಸ್ಪರ್ಧೆ ಇಂಗ್ಲಿಷ್ ಭಾಷಣ ವಿಭಾಗದಲ್ಲಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ. ಶಾಲೆಯ ಐದು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ರುದ್ರೇಶ್ ಹೆಮ್ಮೆಯಿಂದ ಹೇಳುತ್ತಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಇನ್ನೂ ಹಲವು ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಹೋಗಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶೇ 100 ಫಲಿತಾಂಶ ಪಡೆಯುತ್ತಿರುವ ಈ ಶಾಲೆ ಪಠ್ಯ ಶಿಕ್ಷಣದಲ್ಲೂ ಒಂದು ಹೆಜ್ಜೆ ಮುಂದಿದೆ.

ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೇಬಿ ಸಿಟ್ಟಿಂಗ್, ಎಲ್‌ಕೆಜಿ ಯಿಂದ 10ನೇ ತರಗತಿವರೆಗೆ ವ್ಯಾಸಂಗ ನೀಡುತ್ತಿರುವ ಇಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ 40 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಸುರೇಶ್ `ಪ್ರಜಾವಾಣಿ'ಗೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.