ADVERTISEMENT

ವಿಜಯೋತ್ಸವ: ಸಭಾಂಗಣದೊಳಗೆ ನುಗ್ಗಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 7:35 IST
Last Updated 12 ಅಕ್ಟೋಬರ್ 2012, 7:35 IST

ಹಾಸನ: ಯಾವುದೇ ಚುನಾವಣೆ ಸಂದರ್ಭದಲ್ಲೂ ಫಲಿತಾಂಶ ಘೋಷಣೆ ಯಾದ ಬಳಿಕ ರಸ್ತೆಗಳಲ್ಲಿ ವಿಜಯೋತ್ಸವ ನಡೆಯುವುದು ಸಾಮಾನ್ಯ. ಆದರೆ ಗುರು ವಾರ ಜಿಲ್ಲಾ ಪಂಚಾಯಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಸಂಪ್ರದಾಯವನ್ನು ಮುರಿದು, ಜಿಲ್ಲಾ ಪಂಚಾಯಿ ತಿಯ ಹೊಯ್ಸಳ ಸಭಾಂಗಣದಲ್ಲೇ ವಿಜಯೋತ್ಸವ ಆಚರಿಸಿದ ಘಟನೆ ನಡೆದಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸುತ್ತ ಭದ್ರತಾ ವ್ಯವಸ್ಥೆ ಮಾಡಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ನೂರಾರು ಕಾರ್ಯಕರ್ತರು ಮೂರನೇ ಮಹಡಿಯಲ್ಲಿರುವ ಸಭಾಂಗಣಕ್ಕೆ ನುಗ್ಗಿ ಜೈಕಾರ ಹಾಕಿದರು. ಇದರಿಂದಾಗಿ ಸಭಾಂಗಣದಲ್ಲಿ ಭಾರಿ ಗೊಂದಲ ಉಂಟಾಯಿತು. ನೂತನ ಅಧ್ಯಕ್ಷರಿಗೆ ಅಭಿನಂದಿಸಲು ಸಾಧ್ಯವಾಗದೆ ಕೆಲವು ಜಿ.ಪಂ. ಸದಸ್ಯರೇ ಸಭಾಂಗಣದಿಂದ ಹೊರನಡೆದರು. ಏಕಾಯೇಕಿ ಸಭಾಂಗಣದೊಳಗೆ ನುಗ್ಗಿದ ಕಾರ್ಯಕರ್ತರ ಜೈಕಾರ, ಘೋಷಣೆಗಳಿಂದಾಗಿ ಅಧ್ಯಕ್ಷರ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಿಂತಿದ್ದ ಪತ್ರಕರ್ತರಿಗೂ ಮಾತನಾಡಲು ಸಾಧ್ಯವಾಗಲಿಲ್ಲ.

ಕೊನೆಗೆ ಪಕ್ಕದ ಇನ್ನೊಂದು ಸಭಾಂಗಣಕ್ಕೆ ಅಧ್ಯಕ್ಷ- ಉಪಾಧ್ಯಕ್ಷರನ್ನು ಕರೆಸಿ ಮಾತುಕತೆ ನಡೆಸಲಾಯಿತು.
ಒಪ್ಪಂದ ಆಗಿಲ್ಲ: ಜಿಲ್ಲಾ ಪಂಚಾಯಿತಿ ಇರಲಿ, ನಗರಸಭೆ ಇರಲಿ ಯಾರನ್ನೂ ಪೂರ್ಣಾವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಸಂಪ್ರದಾಯ ಜೆಡಿಎಸ್‌ನಲ್ಲಿ ಇಲ್ಲ. ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಯಲ್ಲಿ ಮೊದಲ 8ತಿಂಗಳು ಬಿ.ಡಿ.ಚಂದ್ರೇಗೌಡ ಹಾಗೂ ಉಳಿದ 12 ತಿಂಗಳಿಗೆ ಬಿ.ಆರ್.ಸತ್ಯನಾರಾಯಣ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಗೆ ಇಂಥ ಯಾವುದೇ ಒಪ್ಪಂದ ಆಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿದ್ದರೂ, ಈ ಅವಧಿಯಲ್ಲೂ ಕನಿಷ್ಠ ಇಬ್ಬರಿಗೆ ಅಧ್ಯಕ್ಷಗಿರಿಯ ಅವಕಾಶ ಲಭಿಸುವ ಸೂಚನೆಗಳಿವೆ. ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವುದು ಎಂದು ಪಕ್ಷದ ಕೆಲವರು ನುಡಿದಿದ್ದಾರೆ.

ರಾಜಕೀಯ ಹಿನ್ನೆಲೆ: ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅಂಬಿಕಾ ರಾಮಕೃಷ್ಣ ಮೊದಲಬಾರಿ ಜಿ.ಪಂ. ಸದಸ್ಯೆಯಾಗಿದ್ದರೂ ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು.
ಮಾಜಿ ಶಾಸಕ ಎನ್.ಗಂಗಾಧರ್ ಅವರ ಮೂರನೇ ಸೊಸೆ ಯಾಗಿರುವ ಅಂಬಿಕಾ ಅವರ ಪತಿ ರಾಮಕೃಷ್ಣ ಅವರೂ ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿದ್ದರು.  ಅಂಬಿಕಾ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಹಿರೀಸಾವೆ ಹೋಬಳಿಯಲ್ಲಿ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಹೊಸ ಅಧ್ಯಕ್ಷರು ಈ ಸಮಸ್ಯೆಯನ್ನು ನೀಗಿಸಲು ಶ್ರಮಿಸುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.