ADVERTISEMENT

ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 4:35 IST
Last Updated 10 ನವೆಂಬರ್ 2012, 4:35 IST

ಸಕಲೇಶಪುರ: ಕಾಲೇಜಿನ ಕ್ಯಾಂಪಸ್‌ಗೆ ಬಂದು ವಿದ್ಯಾರ್ಥಿಗಳಿಗೆ ಸುರಕ್ಷತಾ ಚಾಲನೆ ಬಗ್ಗೆ ಮಾಹಿತಿ ನೀಡುವುದಲ್ಲದೆ. ಚಾಲನಾ ಅನುಭವ ಇರುವ ವಿದ್ಯಾ ರ್ಥಿಗಳಿಗೆ ಕಾಲೇಜಿನಲ್ಲಿಯೇ ಚಾಲನಾ ಪರವಾನಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಅಂಗವಾಗಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್‌ಟಿಓ ಕಚೇರಿಗಳ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕವೇ ಕೆಲಸ ಮಾಡಿಕೊಳ್ಳಬೇಕು ಎಂಬ ಸಾರ್ವಜನಿಕ ಭಾವನೆಯನ್ನು ನೂತನ ಎಆರ್‌ಟಿಓ ಕೇಶವ ಭರಣಿ ಸುಳ್ಳು ಮಾಡಿದ್ದಾರೆ ಎಂದರು.

ಎಆರ್‌ಆರ್‌ಟಿಒ ಕೇಶವ ಧರಣಿ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ದೇಶದಲ್ಲಿ ವಾಹನಗಳು ಹೊರಸೂಸುವ ವಾಯು ಮಾಲಿನ್ಯದಿಂದ ವರ್ಷದಲ್ಲಿ 27 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. 6 ಕೋಟಿ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಅಪಘಾತಗಳಿಂದ ಒಂದೂವರೆ ಲಕ್ಷ ಜನರು ಮೃತರಾಗುತ್ತಿದ್ದಾರೆ, 12 ಲಕ್ಷ ಮಂದಿ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ. ರಸ್ತೆ ಅಪಘಾತಗಳ ಸಾವಿನ ಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಾಗಿದ್ದು, ರಸ್ತೆ ನಿಮಗಳನ್ನು ಪಾಲಿಸದೆ ಇರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದರು.

ಯುವ ಜನರು ಈ ಬಗ್ಗೆ ಜಾಗೃತರಾದರೆ ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಹಾಗೂ ಚಾಲನೆಯಿಂದ ಆಗುತ್ತಿರುವ ಅಪಘಾತ ಕಡಿಮೆಯಾಗುತ್ತದೆ. ಎಲ್ಲರೂ ಪರಿಸರವನ್ನು ಗೌರವಿಸಿ ಪ್ರೀತಿಸಿದರೆ ಈ ಭೂಮಿಯ ಮೇಲೆ ಮನುಕುಲ ಉಳಿಯುತ್ತದೆ. ಪರಿಸರ ಮುನಿಸಿಕೊಂಡರೆ ಮನು ಕುಲವೇ ಅಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ಕಾಲೇಜಿ ನಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ವಿತರಿಸಲಾಯಿತು. ಪ್ರಾಂಶುಪಾಲರಾದ ಎಚ್.ಡಿ. ಕುಮಾರ್, ಬ್ರೇಕ್ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.