ADVERTISEMENT

ಶನೇಶ್ವರಸ್ವಾಮಿ ವಿಜೃಂಭಣೆಯ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 6:44 IST
Last Updated 24 ಅಕ್ಟೋಬರ್ 2017, 6:44 IST

ಚನ್ನರಾಯಪಟ್ಟಣ: ಶನೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ದೇವರಿಗೆ ಪೂಜೆ, ಹೋಮ, ಅಭಿಷೇಕ ನಡೆಯಿತು.

ಜಂಬೂರು, ಹೆಬ್ಬಳಲು, ಹಾರೋ ಸೋಮನಹಳ್ಳಿ, ಅತ್ತಿಹಳ್ಳಿ, ಹುಲಿಕೆರೆ, ಸಿದ್ದರಹಟ್ಟಿ, ನುಗ್ಗೇಹಳ್ಳಿ, ಕಾರೇಕೆರೆ, ತಾವರೆಕೆರೆ, ಜಿ.ಎನ್‌. ಕೊಪ್ಪಲು, ವಿರೂಪಾಕ್ಷಿಪುರದ ಗ್ರಾಮ ದೇವತೆಗಳನ್ನು ಮೆರವಣಿಗೆ ಮೂಲಕ ಜಂಬೂರು ಗ್ರಾಮಕ್ಕೆ ಕರೆತರಲಾಯಿತು.

ನಂದಿಧ್ವಜ, ವೀರಗಾಸೆ, ತಮಟೆ ವಾದ್ಯದ ನಾದದೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ಸಾಗಿದರು.
ಗ್ರಾಮದೇವತೆಗಳ ಮೆರವಣಿಗೆ ಶನೇಶ್ವರಸ್ವಾಮಿ ದೇಗುಲದ ಬಳಿ ಬಂದಾಗ ಪೂಜೆ ಸಲ್ಲಿಸಿ ಅಲಂಕೃತ ರಥದಲ್ಲಿ ಶನೇಶ್ವರಸ್ವಾಮಿ ದೇವರ ಪ್ರತಿಷ್ಠಾಪಿಸಲಾಯಿತು.

ADVERTISEMENT

ವೃಷಭ ಲಗ್ನದಲ್ಲಿ ರಥೋತ್ಸವ ಚಾಲನೆ ಪಡೆದಿದ್ದು, ಭಕ್ತರು ಜಯಘೋಷ ಕೂಗಿ ತೇರು ಎಳೆದರು. ಭಕ್ತರು ರಥ, ಕಳಸದತ್ತ ಬಾಳೆಹಣ್ಣು ಎಸೆದು ಭಕ್ತಿ ನಮಿಸಿದರು.
ಊರಿನ ಕೋಟೆ ಮಾರಮ್ಮನ ದೇವಸ್ಥಾನದ ತನಕ ತೆರಳಿದ ರಥ ಪುನಃ ಸ್ವಸ್ಥಾನಕ್ಕೆ ಬಂತು. ಸಂಜೆ ಸ್ವಾಮಿಯ ಉಯ್ಯಾಲೋತ್ಸವ, ಶನೇಶ್ವರಸ್ವಾಮಿ ಹಾಗೂ ಕೋಟೆ ಮಾರಮ್ಮದೇವಿಯ ಪಲ್ಲಕ್ಕಿ ಉತ್ಸವ ಜರುಗಿತು.

ವಿಧಾನಪರಿಷತ್ತಿನ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ದೇವಸ್ಥಾನದ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.
ಸೋಮವಾರ ರಾತ್ರಿ ‘ಶನಿಪ್ರಭಾವ’ ಪೌರಾಣಿಕ ನಾಟಕ ಪ್ರದರ್ಶನವಿತ್ತು. ಅ. 19 ರಿಂದ ಜಾತ್ರಾ ಮಹೋತ್ಸವ 5 ದಿನ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.