ADVERTISEMENT

ಶಾಲೆ ಪುನರಾರಂಭಕ್ಕೆ ಆಗ್ರಹಿಸಿ ಪಾಲಕರ ಪ್ರತಿಭಟನೆ

ನವೋದಯ ಶಾಲೆ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 8:04 IST
Last Updated 15 ಫೆಬ್ರುವರಿ 2013, 8:04 IST
ನವೋದಯ ಶಾಲೆಯ ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ಪಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನವೋದಯ ಶಾಲೆಯ ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ಪಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.   

ಹಾಸನ: `ಜವಾಹರ ನವೋದಯ ವಿದ್ಯಾಲಯಗಳ ಶಿಕ್ಷಕರ ಬೇಡಿಕೆಯನ್ನು ಈಡೇರಿಸಿ ಶಾಲೆಗಳು ಪುನರಾರಂಭವಾಗುವಂತೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿ ಮಾವಿನಕೆರೆ ನವೋದಯ ಶಾಲೆ ವಿದ್ಯಾರ್ಥಿಗಳ ಪಾಲಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದಾದ್ಯಂತ ನವೋದಯ ವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಕಳೆದ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅಂದಿನಿಂದಲೇ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಅವರ ಶಿಕ್ಷಣದ ಮೇಲೆ ಪರಿಣಾಮ ಉಂಟಾಗುತ್ತಿದೆ. ಶಿಕ್ಷಕರ ಬೇಡಿಕೆಗಳೂ ನ್ಯಾಯಸಮ್ಮತವಾಗಿರುವುದರಿಂದ ಕೂಡಲೇ ಅವುಗಳನ್ನು ಈಡೇರಿಸಿ ಶಾಲೆಗಳಲ್ಲಿ ಪಾಠ ಪ್ರವಚನ ಮುಂದುವರಿಯುವಂತೆ ಅನುಕೂಲ ಕಲ್ಪಿಸಬೇಕು ಎಂದು ಪಾಲಕರು ಒತ್ತಾಯಿಸಿದರು.

ಸಿಬ್ಬಂದಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಬೇರೆ ರಾಜ್ಯದಿಂದ ಬಂದಿರುವ ಮಕ್ಕಳನ್ನು ಹೊರತುಪಡಿಸಿ ಎಲ್ಲ ಮಕ್ಕಳನ್ನೂ ಮನೆಗೆ ಕಳುಹಿಸಲಾಗಿದೆ.  12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸಿರುವ ಹಿನ್ನೆಲೆಯಲ್ಲಿ ಅವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಶಿಕ್ಷಕರು   ತಿಳಿಸಿದ್ದಾರೆ.

ಮಾವಿನಕೆರೆಯ ವಿದ್ಯಾಲಯ ವಸತಿಶಾಲೆಯಾಗಿದ್ದರೂ ಪ್ರತ್ಯೇಕ ವಾರ್ಡನ್‌ಗಳಿಲ್ಲ. 500 ವಿದ್ಯಾರ್ಥಿಗಳಿಗೆ ಊಟ ತಯಾರಿಸಲು ಕೇವಲ ಮೂವರು ಸಿಬ್ಬಂದಿ ಇದ್ದಾರೆ.  ಶೌಚಾಲಯ ಹಾಗೂ ವಸತಿಗೃಹಗಳ ಸ್ವಚ್ಛತೆಯನ್ನು ವಿದ್ಯಾರ್ಥಿಗಳೇ ಮಾಡಬೇಕಾಗಿದೆ.

ಕವಲುಗಾರರ ಕೊರತೆ ಇದೆ. ಇಲ್ಲಿಗೆ ಒಂದು ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಬೇಕು. ಈ ಸಮಸ್ಯೆಗಳಲ್ಲದೆ ಶಿಕ್ಷಕರ 20 ಬೇಡಿಕೆಗಳನ್ನೂ ಕೂಡಲೇ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದ ಹೇಮಾವತಿ ಪ್ರತಿಮೆ ಮುಂದಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಪಾಲಕರು ಇಲ್ಲಿ ಮನವಿಯನ್ನು ಸಲ್ಲಿಸಿದರು. ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.