ADVERTISEMENT

ಶಿಕ್ಷಣ ಅಭಿವೃದ್ಧಿಯ ಸಾಧನ: ಕೃಷ್ಣೇಗೌಡ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:59 IST
Last Updated 19 ಸೆಪ್ಟೆಂಬರ್ 2013, 6:59 IST

ಹಳೇಬೀಡು: ಶಿಕ್ಷಣ ವ್ಯಕ್ತಿಯ ಸರ್ವೋತೋಮುಖ ಅಭಿವೃದ್ಧಿಯ ಸಾಧನ. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಸಂಪರ್ಕ ಭಾಷೆ ಇಂಗ್ಲಿಷ್ ಜ್ಞಾನವನ್ನು ನೀಡಬೇಕು ಎಂದು ಹಾಸನ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗ ಸಂಯೋಜಕ ಪ್ರೊ.ಡಿ.ಜಿ. ಕೃಷ್ಣೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಸಮಾಜಶಾಸ್ತ್ರ ವಿಚಾರ ಸಂಕಿರಣ ಹಾಗೂ ಗೋಡೆ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ವೃತ್ತಿ ಆಧಾರಿತ ಶಿಕ್ಷಣ ಜಾರಿಗೆ ಬಂದರೆ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಇಲ್ಲದಿದ್ದರೆ ಆರ್ಥಿಕ ಸ್ಥಿತಿಗತಿಯ ಸುಧಾರಣೆ ಅಸಾಧ್ಯವಾಗುತ್ತದೆ ಎಂದರು.

ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ದೇವಿರಯ್ಯ ಮಾತನಾಡಿದರು. ಪ್ರಾಚಾರ್ಯ ಎಸ್. ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿರುವ ಶ್ರೀದೇವಿ, ನಂದಿನಿ ಹಾಗೂ ಪದವಿಯಲ್ಲಿ ಉತ್ತಮ ಅಂಕಗಳಿಸಿದ ಚಾಂದಿನಿ, ವಿದ್ಯಾ, ಭುವನೇಶ್ವರಿ, ಸುಮಲತಾ, ಭವ್ಯ ಅವರಿಗೆ ಡಾ.ದೇವಿರಯ್ಯ ಬಹುಮಾನ ವಿತರಿಸಿದರು. ಪ್ರಾಧ್ಯಾಪಕರು ಹಾಜರಿದ್ದರು.

ಹುಣಸೂರು: ಭಾರಿ ಮಳೆ
ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿ ಭಾಗದಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಕಿರುಸೊಡ್ಲ, ಗಾವಡಗೆರೆ, ಅಗ್ರಹಾರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಮತ್ತು  ಸಂಜೆ ಗಾಳಿಯಿಂದ ಕೂಡಿದ ಭಾರಿ ಮಳೆಯಾಗಿದ್ದು, ಕಿರುಸೊಡ್ಲು ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಗ್ರಾಮಸ್ಥ ಹನುಮೇಗೌಡ ತಿಳಿಸಿದ್ದಾರೆ.

ಗಾವಡಗೆರೆ ಪಂಚಾಯಿತಿಗೆ ಸೇರಿದ ಕಿರುಸೊಡ್ಲು ಗ್ರಾಮಕ್ಕೆ ಈ ಹಿಂದೆ ರೂ 2 ಲಕ್ಷದ ಕಾಮಗಾರಿ ಮಂಜೂರಾಗಿದ್ದರೂ ಪಂಚಾಯಿತಿ ಕಾಮಗಾರಿ ನಡೆಸದೇ ಇರುವುದರಿಂದ ಗ್ರಾಮದೊಳಗೆ ಚರಂಡಿ ಇಲ್ಲದೇ ಮಳೆ ನೀರು ಮನೆಯೊಳಗೆ ನುಗ್ಗಿದೆ.

ಗದ್ದೆ ಬಯಲಿನಲ್ಲಿ ನೀರು: ತಂಬಾಕು ಕೃಷಿ ಫಸಲು ತೆಗೆದು ಅವರೇಕಾಯಿ ಹಾಗು ಬತ್ತದ ಬೇಸಾಯ ಮಾಡಿರುವ ಗದ್ದೆ ಬಯಲಿನಲ್ಲಿ ಮಳೆ ನೀರು ಹೆಚ್ಚಾಗಿ ಸಂಗ್ರಹವಾಗಿದೆ. ಹೀಗಾಗಿ ನಾಟಿ ಮಾಡಿದ ಬತ್ತದ ಪೈರಿಗೂ ಧಕ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.